ಯುಎಇಯಲ್ಲಿ ಉಂಟಾದ ಪ್ರಾದೇಶಿಕ ಉದ್ವಿಗ್ನ ಪರಿಸ್ಥಿತಿಯ ನಡುವೆ ಸಿಲುಕಿಕೊಂಡಿದ್ದ 169 ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ಸಾಹಸಮಯ ಕಾರ್ಯಾಚರಣೆಯಲ್ಲಿ 23 ವರ್ಷದ ಯುವ ಪೈಲಟ್ ದೀಪಿಕಾ ಅಧಾನಾ ಮಹತ್ವದ ಪಾತ್ರ ವಹಿಸಿದ್ದಾರೆ.
ಮಾರ್ಚ್ 6 ರಂದು ರಾಸ್ ಅಲ್ ಖೈಮಾ (Ras Al-Khaimah - UAE) ವಿಮಾನ ನಿಲ್ದಾಣದಿಂದ ನವದೆಹಲಿಗೆ ಭಾರತೀಯರನ್ನು ಕರೆತಂದ ವಿಶೇಷ ವಿಮಾನವನ್ನು ಅವರು ಸಹಪೈಲಟ್ ಆಗಿ ನಡೆಸಿದರು. ಈ ವಿಮಾನದಲ್ಲಿ ಒಟ್ಟು 169 ಭಾರತೀಯರು ಸುರಕ್ಷಿತವಾಗಿ ತಾಯ್ನಾಡಿಗೆ ತಲುಪಿದರು. ಈ ಕಾರ್ಯಾಚರಣೆ ವಿಶೇಷವಾಗಿದ್ದ ಮತ್ತೊಂದು ಕಾರಣವೆಂದರೆ, ಈ ವಿಮಾನವನ್ನು ಎಲ್ಲ ಮಹಿಳೆಯರನ್ನೊಳಗೊಂಡ ಸಿಬ್ಬಂದಿ ತಂಡ ನಡೆಸಿತ್ತು. ಈ ತಂಡವನ್ನು ಕ್ಯಾಪ್ಟನ್ ಜಸ್ವಿಂದರ್ ಕೌರ್ ಮುನ್ನಡೆಸಿದರು.
ತುರ್ತು ಕರೆಯ ನಡುವೆ ಆರಂಭವಾದ ಮಿಷನ್
ಮಾರ್ಚ್ 6ರ ಬೆಳಗ್ಗೆ ದೀಪಿಕಾ ಅಧಾನಾಗೆ ಈ ವಿಶೇಷ ಕಾರ್ಯಾಚರಣೆಯ ಕುರಿತು ಮಾಹಿತಿ ನೀಡಲಾಯಿತು. ಮೂಲತಃ ಈ ವಿಮಾನವನ್ನು ನಡೆಸಬೇಕಿದ್ದ ಮತ್ತೊಬ್ಬ ಪೈಲಟ್ ಬದಲಿಗೆ ಕೇವಲ ಎರಡು ಗಂಟೆಗಳ ಮೊದಲು ದೀಪಿಕಾ ಅವರನ್ನು ಕರೆಯಲಾಗಿತ್ತು. ಯಾವುದೇ ಹಿಂಜರಿಕೆಯಾಗದೆ ಅವರು ಈ ಹೊಣೆಗಾರಿಕೆಯನ್ನು ಸ್ವೀಕರಿಸಿ ತಕ್ಷಣವೇ ಯುಎಇಗೆ ತೆರಳಿ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
ಕೆಲ ಕ್ಷಣಗಳ ಆತಂಕ
ವಿಮಾನವು ರಾಸ್ ಅಲ್ ಖೈಮಾದಲ್ಲಿ ಮಧ್ಯಾಹ್ನ ಸುಮಾರು 2 ಗಂಟೆಗೆ ಇಳಿದಿತ್ತು. ಬಳಿಕ ಪ್ರಯಾಣಿಕರು ವಿಮಾನಕ್ಕೆ ಹತ್ತಿ ಭಾರತಕ್ಕೆ ಮರಳುವ ಪ್ರಯಾಣ ಆರಂಭಿಸಿದರು. ಈ ವೇಳೆ ಕೆಲವು ಕ್ಷಣಗಳ ಕಾಲ ಎರ್ ಟ್ರಾಫಿಕ್ ಕಂಟ್ರೋಲ್‌ನೊಂದಿಗೆ ಸಂಪರ್ಕ ಕಡಿತವಾಗಿದ್ದರಿಂದ ಆತಂಕದ ಪರಿಸ್ಥಿತಿ ಉಂಟಾಯಿತು. ಆದರೆ ನಂತರ ಸಂಪರ್ಕ ಪುನಃ ಸ್ಥಾಪನೆಯಾಗಿ ವಿಮಾನವು ಸುರಕ್ಷಿತವಾಗಿ ನವದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿತು.
ತಾಯಿಗೆ ಹೇಳಿದ ಮಾತು ವೈರಲ್
ಈ ಮಿಷನ್‌ಗೆ ತೆರಳುವ ಮೊದಲು ದೀಪಿಕಾ ಅವರು ತಮ್ಮ ತಾಯಿಗೆ ಹೇಳಿದ ಮಾತು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. “ಅಮ್ಮಾ, ನಾನು ಹೋಗುತ್ತಿದ್ದೇನೆ… ಮರಳಿ ಬರುತ್ತೇನೆ ಅಥವಾ ಇಲ್ಲವೇ ಗೊತ್ತಿಲ್ಲ,” ಎಂದು ಅವರು ಹೇಳಿದ್ದಾಗಿ ವರದಿಯಾಗಿದೆ.
ಹರಿಯಾಣದ ಯುವತಿಯ ಸಾಧನೆ
ದೀಪಿಕಾ ಅಧಾನಾ ಹರಿಯಾಣದ ಫರಿದಾಬಾದ್ ಮೂಲದವರು. ಅವರ ತಂದೆ ವಾಸ್ತುಶಿಲ್ಪಿಯಾಗಿದ್ದು, ತಾಯಿ ಗೃಹಿಣಿ. ಪೈಲಟ್ ಆಗಬೇಕೆಂಬುದು ಅವರ ಕುಟುಂಬದ ಕನಸಾಗಿದ್ದು, ಇಂದು ಕೇವಲ 23ನೇ ವಯಸ್ಸಿನಲ್ಲಿ ಅವರು ದೇಶಕ್ಕೆ ಹೆಮ್ಮೆ ತಂದಿದ್ದಾರೆ.
ದೇಶದ ಹೆಮ್ಮೆ
ಯುಎಇಯಿಂದ 169 ಭಾರತೀಯರನ್ನು ಸುರಕ್ಷಿತವಾಗಿ ಕರೆತಂದ ಈ ಕಾರ್ಯಾಚರಣೆ ದೇಶದಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವರು ದೀಪಿಕಾ ಅಧಾನಾ ಮತ್ತು ಅವರ ತಂಡದ ಸಾಧನೆಯನ್ನು ಕೊಂಡಾಡುತ್ತಿದ್ದಾರೆ.





