22 June 2026 |

ಮಂಗಳೂರು: ಅರಿಫ್ ಹತ್ಯೆ ಪ್ರಕರಣ ಭೇದಿಸಿದ ಪೊಲೀಸ್ — 7 ಮಂದಿ ಬಂಧನ, ವಿದೇಶಿ ಸಂಪರ್ಕ ಬಹಿರಂಗ

  • 08 Apr 2026 10:52:42 PM

ಮಂಗಳೂರು: ಉಳ್ಳಾಲ ಕಿನ್ಯಾ ಅಜ್ಜಿನಡ್ಕ ನಿವಾಸಿ ಹಾಗೂ ರೌಡಿಶೀಟರ್ ಆಗಿದ್ದ ಅರಿಫ್ ಹತ್ಯೆ ಪ್ರಕರಣವನ್ನು ಮಂಗಳೂರು ನಗರ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಲಾಗಿದ್ದು, ಈ ಹತ್ಯೆಯ ಹಿಂದೆ ಸ್ಥಳೀಯ ಗುಂಪುಗಳ ಜೊತೆಗೆ ವಿದೇಶದಲ್ಲಿರುವ ಸಂಪರ್ಕಗಳೂ ಇರುವುದಾಗಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

 

ಬಂಧಿತ ಆರೋಪಿಗಳನ್ನು ರಿಫಾತ್, ಜುಟ್ಟು ಅಶ್ಫಾಕ್, ಖಲೀಲ್, ಶಾಕಿರ್, ಇರ್ಫಾನ್, ರಿಜ್ವಾನ್ ಮತ್ತು ಇರ್ಷಾದ್ ಎಂದು ಗುರುತಿಸಲಾಗಿದೆ. ಪೊಲೀಸ್ ಆಯುಕ್ತರು ನೀಡಿದ ಮಾಹಿತಿಯಂತೆ, ಹಳೆಯ ವೈಷಮ್ಯವೇ ಈ ಹತ್ಯೆಗೆ ಪ್ರಮುಖ ಕಾರಣವಾಗಿರುವ ಸಾಧ್ಯತೆ ಇದೆ.  ಆರಿಫ್ ಹತ್ಯೆಗೆ ಇರ್ಷಾದ್ ಆರೋಪಿಗಳಿಗೆ ವಾಸ್ತವ್ಯ ವ್ಯವಸ್ಥೆ ಮಾಡಿ, ಘಟನೆ ಸ್ಥಳಕ್ಕೆ ಸಾಗಾಟದಲ್ಲಿ ಸಹಕರಿಸಿದ್ದಾನೆ ಎಂದು ತಿಳಿದುಬಂದಿದೆ. ಸುಹೈಲ್ ಎಂಬಾತ ರಿಫಾತ್‌ಗೆ ಕಾರು ಬಾಡಿಗೆಗೆ ಒದಗಿಸಿ ಬಳಿಕ ಸೌದಿ ಅರೇಬಿಯಾಗೆ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಮತ್ತೊಬ್ಬ ಆರೋಪಿ ಅರ್ಷಾದ್ ಶಸ್ತ್ರಾಸ್ತ್ರಗಳನ್ನು ಒದಗಿಸುವುದರ ಜೊತೆಗೆ ಪೊಲೀಸರ ಚಲನವಲನಗಳ ಮೇಲೆ ನಿಗಾ ಇಟ್ಟು ತಂಡಕ್ಕೆ ಮಾಹಿತಿ ನೀಡುತ್ತಿದ್ದನು ಎಂದು ಹೇಳಲಾಗಿದೆ.

 

ಸಂಚುನಿಟ್ಟಾಗಿ ನಡೆದ ಕೊಲೆ
ಮಾರ್ಚ್ 27ರಂದು ಬೆಳಿಗ್ಗೆ ಅರಿಫ್ ಬೈಕ್‌ನಲ್ಲಿ ಬಂಡರ್ ಮೀನು ಮಾರುಕಟ್ಟೆ ಕಡೆ ತೆರಳುತ್ತಿದ್ದ ವೇಳೆ ತೊಕ್ಕೊಟ್ಟು ಫ್ಲೈಓವರ್ ಬಳಿ ಅವನನ್ನು ಹಿಂಬಾಲಿಸುತ್ತಿದ್ದ ಕಾರು ಬೈಕ್‌ಗೆ ಡಿಕ್ಕಿ ಹೊಡೆದು ಕೆಳಗೆ ಬೀಳುವಂತೆ ಮಾಡಿದೆ. ತಕ್ಷಣವೇ ಹತ್ತಿರದಲ್ಲಿದ್ದ ತಂಡ ಘಾತಕಾಸ್ತ್ರಗಳಿಂದ ದಾಳಿ ನಡೆಸಿ ಅರಿಫ್‌ನನ್ನು ಸ್ಥಳದಲ್ಲೇ ಹತ್ಯೆ ಮಾಡಿ ಪರಾರಿಯಾಗಿದ್ದರು.

 

ಡಿಜಿಟಲ್ ತಂತ್ರ ಬಳಕೆ
ಗ್ಯಾಂಗ್ ಪತ್ತೆಯಾಗದಂತೆ ತಪ್ಪಿಸಿಕೊಳ್ಳಲು ತಂತ್ರಜ್ಞಾನವನ್ನು ಸಹ ಬಳಸಿಕೊಂಡಿದ್ದು, ದುಬೈನಲ್ಲಿ ಇರುವ ಅಶ್ವೀರ್ ಎಂಬಾತ ವಾಟ್ಸ್ಆಪ್ OTPಗಳನ್ನು ಹಂಚಿ ಅಂತಾರಾಷ್ಟ್ರೀಯ ಸಂಖ್ಯೆಗಳ ಮೂಲಕ ಸಂಪರ್ಕ ಕಾಯ್ದುಕೊಳ್ಳಲು ನೆರವಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

 

ವಿದೇಶದಿಂದ ಹಣಕಾಸು ನೆರವು
ಮುಸ್ತಫಾ ಹಾಗೂ ಅಶ್ವೀರ್ ಎಂಬವರು ವಿದೇಶದಲ್ಲಿದ್ದು ಆರೋಪಿಗಳ ಓಡಾಟ ಮತ್ತು ವಾಸ್ತವ್ಯಕ್ಕೆ ಹಣಕಾಸು ಸಹಾಯ ನೀಡಿರುವುದೂ ತನಿಖೆಯಲ್ಲಿ ದೃಢಪಟ್ಟಿದೆ. ಈ ಪ್ರಕರಣದಲ್ಲಿ ಇನ್ನೂ ಕೆಲವರು ಭಾಗಿಯಾಗಿರುವ ಶಂಕೆ ಇದ್ದು, ಉಳಿದ ಆರೋಪಿಗಳನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.