ಯಮುನಾ ನದಿಯಲ್ಲಿ ದೋಣಿ ಪಲ್ಟಿ: 11 ಭಕ್ತರ ದುರ್ಮರಣ, ಹಲವರು ಗಂಭೀರ

  • 12 Apr 2026 01:49:55 PM

ಉತ್ತರ ಪ್ರದೇಶದ ವೃಂದಾವನ ಸಮೀಪ ಯಮುನಾ ನದಿಯಲ್ಲಿ ಶುಕ್ರವಾರ ಸಂಭವಿಸಿದ ದುರಂತದಲ್ಲಿ ಕನಿಷ್ಠ 11 ಮಂದಿ ಸಾವನ್ನಪ್ಪಿರುವ ಘಟನೆ ದೇಶವನ್ನು ಬೆಚ್ಚಿಬೀಳಿಸಿದೆ. ಭಕ್ತರು ದೇವರ ಭಜನೆಗಳನ್ನು ಹಾಡುತ್ತಾ, ಕೈ ಚಪ್ಪಾಳೆ ತಟ್ಟುತ್ತಾ ದೋಣಿ ವಿಹಾರ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ನೋಡುಗರ ಮನಸನ್ನು ಕರಗಿಸುವಂತಿದೆ.

 

ಸುಮಾರು 15 ಮಂದಿಗೆ ಮಾತ್ರ ಅನುಮತಿ ಇದ್ದ ಖಾಸಗಿ ದೋಣಿಯಲ್ಲಿ 25ಕ್ಕಿಂತ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯ ನದಿಯಲ್ಲಿ ಬಲವಾದ ಗಾಳಿಯ ಪರಿಣಾಮ ದೋಣಿ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ.

 

ಘಟನೆಯ ಬಳಿಕ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಗೊಂಡಿದ್ದು, 15 ಮಂದಿಯನ್ನು ಜೀವಂತವಾಗಿ ರಕ್ಷಿಸಲಾಗಿದೆ. ಈ ಘಟನೆಯಲ್ಲಿ 10 ಜನರ ಪ್ರಾಣಪಕ್ಷಿ ಯಮುನಾ ನದಿಯಲ್ಲೇ ಹಾರಿಹೋಗಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮೂವರ ಪರಿಸ್ಥಿತಿ ಇನ್ನು ಗಂಭೀರವಾಗಿದೆ ಎಂದು ವರದಿಯಾಗಿದೆ.

 

ಮೃತರಲ್ಲಿ ಮಹಿಳೆಯರೂ ಸೇರಿದ್ದಾರೆ. ಹಲವು ಪ್ರಯಾಣಿಕರು ಜೀವ ರಕ್ಷಕ ಜಾಕೆಟ್ ಧರಿಸಿರಲಿಲ್ಲ ಎಂಬುದೂ ತಿಳಿದುಬಂದಿದೆ. ದೋಣಿ ಸರಿಯಾಗಿ ನಿರ್ವಹಣೆ ಆಗಿರಲಿಲ್ಲ ಎಂಬ ಅನುಮಾನ ವ್ಯಕ್ತವಾಗಿದೆ. ಘಟನೆ ಬಳಿಕ ದೋಣಿ ನಿರ್ವಾಹಕ ಸ್ಥಳದಿಂದ ಪರಾರಿಯಾಗಿರುವುದಾಗಿ ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

 

ಈ ದುರಂತ ಪ್ರವಾಸಿ ತಾಣಗಳಲ್ಲಿ ಸುರಕ್ಷತಾ ಕ್ರಮಗಳ ಅಗತ್ಯವನ್ನು ಮತ್ತೆ ಒತ್ತಿ ಹೇಳುತ್ತಿದೆ. ಸಾಮರ್ಥ್ಯ ಮೀರಿದ ಪ್ರಯಾಣ ಹಾಗೂ ಭದ್ರತಾ ನಿಯಮಗಳ ನಿರ್ಲಕ್ಷ್ಯ ಎಷ್ಟು ಭೀಕರ ಪರಿಣಾಮ ಉಂಟುಮಾಡಬಹುದು ಎಂಬುದಕ್ಕೆ ಇದು ಉದಾಹರಣೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.