ಕನ್ನಡ ನಟ ಧ್ರುವ ಸರ್ಜಾ ಇತ್ತೀಚೆಗೆ ಆಟೋ ಚಾಲಕರ ಸಂಕಷ್ಟದ ಬಗ್ಗೆ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಗಮನ ಸೆಳೆದಿದೆ. ತಮ್ಮ ಸಂದೇಶದಲ್ಲಿ ಅವರು ಆಟೋ ಚಾಲಕರನ್ನು “ನಮ್ಮ ದೇಶದ ಬೆನ್ನೆಲುಬು” ಎಂದು ವರ್ಣಿಸಿ, ಅವರು ಎದುರಿಸುತ್ತಿರುವ ಗ್ಯಾಸ್ ಕೊರತೆಯ ಗಂಭೀರ ಪರಿಸ್ಥಿತಿಯನ್ನು ಹಂಚಿಕೊಂಡಿದ್ದಾರೆ.
ಧ್ರುವ ಸರ್ಜಾ ಹೇಳುವಂತೆ, ಹಲವು ಪ್ರದೇಶಗಳಲ್ಲಿ ಎಲ್‌ಪಿಜಿ ಗ್ಯಾಸ್ ಲಭ್ಯವಿಲ್ಲದ ಕಾರಣ ಆಟೋಗಳು ನಿಂತು ಹೋಗಿವೆ. ಗ್ಯಾಸ್ ಸಿಕ್ಕರೂ, ಸಾಮಾನ್ಯ ದರಕ್ಕಿಂತ ದ್ವಿಗುಣ ಬೆಲೆ ಕೇಳಲಾಗುತ್ತಿದೆ. “ಈ ಪರಿಸ್ಥಿತಿಯಲ್ಲಿ ಅವರು ಹೇಗೆ ಕೆಲಸ ಮಾಡಿ, ಕುಟುಂಬವನ್ನು ನೋಡಿಕೊಳ್ಳುತ್ತಾರೆ?” ಎಂಬ ಪ್ರಶ್ನೆಯನ್ನು ಅವರು ಸರ್ಕಾರಗಳ ಗಮನಕ್ಕೆ ತಂದಿದ್ದಾರೆ.
ರಾಜಕೀಯದ ಬಗ್ಗೆ ಮಾತನಾಡದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ ಧ್ರುವ ಸರ್ಜಾ, ಆಟೋ ಚಾಲಕರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸುವಂತೆ ಹಿರಿಯರಿಗೆ ವಿನಂತಿಸಿದರು.
ವಿಡಿಯೋ ಮೂಲಕ ಮನವಿ ಮಾಡಿದಷ್ಟರಲ್ಲಿ ನಿಲ್ಲದೆ, ಧ್ರುವ ಸರ್ಜಾ 25 ಲಕ್ಷ ರೂಪಾಯಿಗಳ ನೆರವು ಘೋಷಿಸಿ ಮಾನವೀಯತೆ ಮೆರೆದಿದ್ದಾರೆ.
ಈ ಮೊತ್ತವನ್ನು ಸಂಕಷ್ಟದಲ್ಲಿರುವ ಆಟೋ ಚಾಲಕರ ಕುಟುಂಬಗಳಿಗೆ ಮತ್ತು ಅವರ ಮಕ್ಕಳಿಗೆ ಸಹಾಯವಾಗಲಿ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಸಮಾಜಮುಖಿ ಕಾರ್ಯಕ್ಕೆ ಅಭಿಮಾನಿಗಳು ಮತ್ತು ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.





