ನಾಳೆ ಏಪ್ರಿಲ್ 15ಕ್ಕೆ ಪ್ರಧಾನಿ ಮೋದಿ ಸಕ್ಕರೆ ನಾಡು ಮಂಡ್ಯಕ್ಕೆ ಭೇಟಿ:

  • 14 Apr 2026 10:42:53 AM

ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 15ರಂದು ಮಂಡ್ಯ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಮಠದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ, ಸುಮಾರು ₹80 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬಾಲಗಂಗಾಧರನಾಥ ಸ್ವಾಮೀಜಿಗಳ ಭೈರವೈಕ್ಯ ಮಂದಿರವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಕಳೆದ 8 ವರ್ಷಗಳಿಂದ ನಿರ್ಮಾಣ ಹಂತದಲ್ಲಿದ್ದ ಈ ಮಂದಿರ ಇದೀಗ ಸಂಪೂರ್ಣಗೊಂಡಿದ್ದು, ಲೋಕಾರ್ಪಣೆಗೆ ಸಜ್ಜಾಗಿದೆ.

 

ಮಂಡ್ಯಕ್ಕೆ ಪ್ರಧಾನಿಯ ಮೂರನೇ ಭೇಟಿ

ಇದು ಮಂಡ್ಯ ಜಿಲ್ಲೆಗೆ ಪ್ರಧಾನಿಯವರ ಮೂರನೇ ಭೇಟಿ ಆಗಿದ್ದು, ಮೊದಲ ಬಾರಿ ಚುನಾವಣಾ ಪ್ರಚಾರಕ್ಕಾಗಿ ಹಾಗೂ ಎರಡನೇ ಬಾರಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗಾಗಿ ಭೇಟಿ ನೀಡಿದ್ದರು. ಈ ಬಾರಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಆದಿಚುಂಚನಗಿರಿ ಮಠ, ಮಂಡ್ಯ ಮತ್ತು ರಾಜ್ಯದ ಭಕ್ತರ ಭಾವನೆಗೆ ಮತ್ತಷ್ಟು ಉತ್ತೇಜನ ಸಿಗಲಿದೆ ಎಂದು ಹೇಳಲಾಗಿದೆ.

 

ಇದೇ ಸಂದರ್ಭದಲ್ಲಿ, ಬಾಲಗಂಗಾಧರನಾಥ ಸ್ವಾಮೀಜಿಗಳ ಪ್ರತಿಷ್ಠಾಪನೆ ಕಾರ್ಯಕ್ರಮವೂ ನಡೆಯಲಿದ್ದು, ಭೈರವೈಕ್ಯ ಮಂದಿರದ ಕುಂಭಾಭಿಷೇಕ ಮಹೋತ್ಸವವೂ ಆಯೋಜಿಸಲಾಗಿದೆ. ಏಪ್ರಿಲ್ 10ರಿಂದ 12ರವರೆಗೆ ಮಠದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದಿದ್ದು, ಅದರ ಭಾಗವಾಗಿ ಏಪ್ರಿಲ್ 15ರಂದು ಪ್ರಧಾನಿ ಮೋದಿ ಭೈರವೈಕ್ಯ ಮಂದಿರವನ್ನು ಉದ್ಘಾಟಿಸಲಿದ್ದಾರೆ.

 

ನಾಲ್ವಡಿ ಕೃಷ್ಣರಾಜ ಒಡೆಯರ್ ಮಾದರಿಯ ಪಗಡಿ

ಪ್ರಧಾನಿ ಮೋದಿ ಅವರನ್ನು ಆದಿಚುಂಚನಗಿರಿ ಶ್ರೀ ಮಠದಲ್ಲಿ ವಿಶಿಷ್ಟವಾಗಿ ಸ್ವಾಗತಿಸಲು ಸಿದ್ಧತೆಗಳು ನಡೆಯುತ್ತಿವೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಧರಿಸಿದ್ದ ಮಾದರಿಯ ಪಗಡಿ (ಟರ್ಬನ್) ಅನ್ನು ವಿಶೇಷವಾಗಿ ಸಿದ್ಧಪಡಿಸಲಾಗಿದ್ದು, ಅದನ್ನು ಪ್ರಧಾನಿಗೆ ಧರಿಸಲಾಗುತ್ತದೆ.

 

ಈ ಪಗಡಿಯನ್ನು ಕಲಾವಿದ ನಂದನ್ ಸಿಂಗ್ ಅವರು 5 ದಿನಗಳ ಕಾಲ ಶ್ರಮಪಟ್ಟು ತಯಾರಿಸಿದ್ದು, ಮೈಸೂರು ಸಿಲ್ಕ್ ಹಾಗೂ ಬನಾರಸ್ ಸಾಫ್ಟ್ ಸಿಲ್ಕ್ ಬಳಸಿ ನಿರ್ಮಿಸಲಾಗಿದೆ. ಮಧ್ಯಭಾಗದಲ್ಲಿ ಮೈಸೂರು ಅರಮನೆ ಚಿಹ್ನೆಯಾದ ಗಂಡಭೇರುಂಡವನ್ನು ಅಳವಡಿಸಲಾಗಿದ್ದು, ಎರಡೂ ಬದಿಗಳಲ್ಲಿ ಮುತ್ತುಗಳನ್ನು ಅಳವಡಿಸಲಾಗಿದೆ.

 

ಸುಮಾರು 1800 ವರ್ಷಗಳ ಇತಿಹಾಸ ಹೊಂದಿರುವ ಆದಿಚುಂಚನಗಿರಿ ಮಠದಲ್ಲಿ ಈ ಕಾರ್ಯಕ್ರಮ ಭವ್ಯವಾಗಿ ನಡೆಯಲಿದ್ದು, ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.