ಮಹಿಳಾ ಮೀಸಲಾತಿ ವಿವಾದ: ವಿರೋಧ ಪಕ್ಷಗಳ ವಿರುದ್ಧ ಯೋಗಿ ‘ದ್ರೌಪದಿ ವಸ್ತ್ರಾಪಹರಣ' ಹೋಲಿಕೆ, ತೀವ್ರ ವಾಗ್ದಾಳಿ

  • 20 Apr 2026 11:53:38 AM

ಲಕ್ನೋ: ಮಹಿಳಾ ಮೀಸಲಾತಿ ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾಗದೆ ಇರುವ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

 

ಕಳೆದ ಗುರುವಾರ ಸಂಸತ್ತಿನಲ್ಲಿ 131ನೇ ಸಂವಿಧಾನ ತಿದ್ದುಪಡಿ ಮಸೂದೆ ಕುರಿತ ಚರ್ಚೆಯ ವೇಳೆ ವಿರೋಧ ಪಕ್ಷದ ನಾಯಕರು ತೋರಿದ ನಡವಳಿಕೆಯನ್ನು ಅವರು ತೀವ್ರವಾಗಿ ಟೀಕಿಸಿದರು. ಈ ಸಂದರ್ಭ, ವಿರೋಧ ಪಕ್ಷಗಳ ವರ್ತನೆಯನ್ನು ಮಹಾಭಾರತದ ‘ದ್ರೌಪದಿ ವಸ್ತ್ರಾಪಹರಣ' ಘಟನೆಯೊಂದಿಗೆ ಹೋಲಿಸಿ ಆಕ್ಷೇಪ ವ್ಯಕ್ತಪಡಿಸಿದರು.

 

ಕಾಂಗ್ರೆಸ್, ಸಮಾಜವಾದಿ ಪಕ್ಷ (SP), ತೃಣಮೂಲ ಕಾಂಗ್ರೆಸ್ (TMC) ಮತ್ತು ಡಿಎಂಕೆ ಪಕ್ಷಗಳು ಮಹಿಳಾ ಮೀಸಲಾತಿ ವಿಷಯದಲ್ಲಿ ತೋರಿದ ನಿಲುವು ದ್ರೌಪದಿ ವಸ್ತ್ರಾಪಹರಣದ ದೃಶ್ಯವನ್ನು ನೆನಪಿಸುವಂತಿದೆ ಎಂದು ಅವರು ಆರೋಪಿಸಿದರು. ವಿರೋಧ ಪಕ್ಷದ ನಾಯಕರು ಮಾಡಿದ ಹೇಳಿಕೆಗಳು ಮತ್ತು ಅವರ ನಡೆ ಸಾರ್ವಜನಿಕವಾಗಿ ಗೋಚರವಾಗಿದ್ದು, ಅದು ಜವಾಬ್ದಾರಿಯುತ ರಾಜಕೀಯಕ್ಕೆ ವಿರುದ್ಧವಾಗಿದೆ ಎಂದು ಅವರು ಕಿಡಿಕಾರಿದರು.

 

ಕ್ಷೇತ್ರಗಳ ಪುನರ್ವಿಂಗಡಣೆಯ ನಂತರ ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು ಉದ್ದೇಶಿಸಿರುವ ಮಸೂದೆಗೆ ‘ಇಂಡಿಯಾ’ ಒಕ್ಕೂಟ ವಿರೋಧ ವ್ಯಕ್ತಪಡಿಸಿರುವುದನ್ನು ಅವರು ಟೀಕಿಸಿದರು. ಲೋಕಸಭೆಯಲ್ಲಿ ಮಸೂದೆಗೆ ಬೆಂಬಲ ಸಿಗದ ಹಿನ್ನೆಲೆಯಲ್ಲಿ, ಸಮಾಜವಾದಿ ಪಕ್ಷ ಸೇರಿದಂತೆ ಒಕ್ಕೂಟದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು.

 

ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕೆಂಬ ಬೇಡಿಕೆ ಕುರಿತು ಮಾತನಾಡಿದ ಅವರು, ಮಹಿಳಾ ಸಬಲೀಕರಣದ ಗುರಿಯನ್ನು ಹೊಂದಿರುವ ಮಸೂದೆ ಕುರಿತು ಅಪ್ರಸ್ತುತ ವಿಚಾರಗಳನ್ನು ಎತ್ತಲಾಗುತ್ತಿದೆ ಎಂದು ಹೇಳಿದರು. ಕೆಲವರು ಸಂವಿಧಾನದ ಬಗ್ಗೆ ಮಾತನಾಡುತ್ತಾರಾದರೂ, ಬಿ. ಆರ್. ಅಂಬೇಡ್ಕರ್ ಅವರ ಆಶಯಗಳಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.

 

ಈ ವಿಚಾರದಲ್ಲಿ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ಮುಂದುವರೆಸಿವೆ.