21 September 2026 |

ವೈದ್ಯನ ವಿಶ್ವಾಸಕ್ಕೆ ದ್ರೋಹ: ಮದುವೆ ಮುನ್ನವೇ ಚಿನ್ನದಾಸೆಗೆ ಸ್ನೇಹಿತನಿಂದ ಕೊಲೆ!

  • 20 Apr 2026 06:10:56 PM

ಕಾರವಾರ: ಚಿನ್ನದ ಆಸೆಗೆ ತನ್ನ ಸ್ನೇಹಿತನನ್ನೇ ಕೊಲೆ ಮಾಡಿದ ಭೀಕರ ಘಟನೆ ಕಾರವಾರ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ. ಮದುವೆಗೆ ಸಜ್ಜಾಗಿದ್ದ ವೈದ್ಯನನ್ನು ಹತ್ಯೆ ಮಾಡಿ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

 

ಬಂಧಿತ ಆರೋಪಿಯನ್ನು ಶಿವಮೊಗ್ಗ ಮೂಲದ ಮಂಜುನಾಥ್ ಪಾಂಡುರಂಗ ನಾಯ್ಕ (68) ಎಂದು ಗುರುತಿಸಲಾಗಿದೆ. ಹತ್ಯೆಗೆ ಬಲಿಯಾದವರು ವೈದ್ಯರಾದ ಡಾ. ರಮೇಶ್ ಕಲಗುಟಕರ (51) ಎಂದು ತಿಳಿದುಬಂದಿದೆ.

 

ಆರೋಪಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ ಡಾ. ರಮೇಶ್ ಅವರೊಂದಿಗೆ ಕಳೆದ ಕೆಲವು ವರ್ಷಗಳಿಂದ ಪರಿಚಯವಿತ್ತು. ಚಿಕಿತ್ಸೆಗೆ ಹಲವು ಬಾರಿ ಬಂದಿದ್ದರಿಂದ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಡಾ. ರಮೇಶ್ ಅವರು ಮಂಜುನಾಥ್ ಅವರನ್ನು ತಮ್ಮ ಮನೆಗೂ ಕರೆದುಕೊಂಡು ಹೋಗಿ ಆತ್ಮೀಯತೆ ತೋರಿಸಿದ್ದರು.

 

ಇಂದು (ಏಪ್ರಿಲ್ 20) ವೈದ್ಯರ ವಿವಾಹ ನಿಗದಿಯಾಗಿದ್ದ ಹಿನ್ನೆಲೆ, ಶನಿವಾರ ಬ್ಯಾಂಕ್‌ಗೆ ತೆರಳಿ ಬಂಗಾರ ಬಿಡಿಸಿಕೊಂಡು ಮನೆಗೆ ತಂದಿದ್ದರು. ವಿಶ್ವಾಸದಿಂದ ಆರೋಪಿಗೆ ಚಿನ್ನಾಭರಣಗಳನ್ನು ತೋರಿಸಿದ್ದರು.

 

ರಾತ್ರಿ ವೇಳೆ ವೈದ್ಯರು ಮಲಗಿದ್ದಾಗ ಆರೋಪಿಯು ಆಯುಧದಿಂದ ತಲೆಗೆ ಬಲವಾಗಿ ಹೊಡೆದು ಹತ್ಯೆ ಮಾಡಿದ್ದಾನೆ. ನಂತರ ಮನೆಗೆ ಬೀಗ ಹಾಕಿ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾನೆ.

 

ಹತ್ಯೆ ನಡೆದ 24 ಗಂಟೆಯೊಳಗೆ ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ಕಳವು ಮಾಡಿದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರೆದಿದೆ.