22 June 2026 |

ಹೈದರಾಬಾದ್–ಹುಬ್ಬಳ್ಳಿ ವಿಮಾನ ಬೆಂಗಳೂರಿಗೆ ತಿರುಗಿಸಿದ ಘಟನೆ: ಏನಾಯಿತು? ಯಾಕಾಯಿತು?

  • 21 Apr 2026 06:43:57 PM

ಬೆಂಗಳೂರು: ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಪ್ರಯಾಣಿಕ ವಿಮಾನವು ತೀವ್ರ ಹವಾಮಾನ ಸಮಸ್ಯೆಗಳ ಕಾರಣದಿಂದಾಗಿ ಬೆಂಗಳೂರಿಗೆ ಡೈವರ್‌ಟ್ ಮಾಡಲಾದ ಘಟನೆ ಎರಡು ದಿನಗಳ ಹಿಂದೆ ನಡೆದಿದೆ. ವಿಮಾನದಲ್ಲಿ ಒಟ್ಟು 22 ಪ್ರಯಾಣಿಕರು ಇದ್ದು, ಎಲ್ಲರೂ ಸುರಕ್ಷಿತವಾಗಿ ಮನೆಗೆ ತಲುಪಿದ್ದಾರೆ.

 

ಏನಾಗಿತ್ತು ಆ ವಿಮಾನಕ್ಕೆ?
ಮೂಲತಃ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನವು ಗಾಳಿ ದಿಕ್ಕು ಬದಲಾವಣೆ (ಕ್ರಾಸ್‌ವಿಂಡ್) ಹಾಗೂ ಅಸ್ಥಿರ ಗಾಳಿಯ ಕಾರಣದಿಂದ ಇಳಿಯಲು ಸಾಧ್ಯವಾಗಲಿಲ್ಲ. ಸುಮಾರು 3 ಗಂಟೆಗಳ ಹೆಚ್ಚು ಕಾಲ ವಿಮಾನವು ಗಾಳಿಯಲ್ಲಿ ತಿರುಗಾಡಿದ ನಂತರ ಪೈಲಟ್ ಸುರಕ್ಷತೆ ದೃಷ್ಟಿಯಿಂದ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಳಿಯಲು ನಿರ್ಧರಿಸಿದರು.

 

ಈ ಅವಧಿಯಲ್ಲಿ ಕೆಲ ಪ್ರಯಾಣಿಕರು ಆತಂಕಗೊಂಡು ಅಳುವ ದೃಶ್ಯಗಳೂ ಕಂಡುಬಂದಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಒಬ್ಬ ಮಹಿಳೆ ಅಳುತ್ತಿರುವುದು, ಕೆಲವರು “ಓ ಮೈ ಗಾಡ್” ಎಂದು ಕೂಗುತ್ತಿರುವುದು ಗೋಚರಿಸುತ್ತದೆ. ಇದೇ ವೇಳೆ ಕೆಲವು ಸಹಪ್ರಯಾಣಿಕರು “ಅಳಬೇಡಿ, ಎಲ್ಲವೂ ಸರಿಯಾಗುತ್ತದೆ” ಎಂದು ಸಮಾಧಾನಪಡಿಸುತ್ತಿರುವುದು ಕೂಡ ಕಾಣುತ್ತದೆ.

 

ತಜ್ಞರು ಏನು ಹೇಳುತ್ತಾರೆ?
ವಿಮಾನಯಾನ ತಜ್ಞರ ಪ್ರಕಾರ, ಇಂತಹ ಘಟನೆಗಳು ಹೆಚ್ಚಾಗಿ ಕ್ರಾಸ್‌ವಿಂಡ್ ಅಥವಾ ಅಸ್ಥಿರ ಗಾಳಿಯ ಪರಿಣಾಮದಿಂದ ಸಂಭವಿಸುತ್ತವೆ. ಗಾಳಿ ವೇಗ ಮತ್ತು ದಿಕ್ಕು ಲ್ಯಾಂಡಿಂಗ್ ಸಮಯದಲ್ಲಿ ಬದಲಾಗಿದ್ರೆ ಪೈಲಟ್‌ಗಳು ಸುರಕ್ಷತೆಗಾಗಿ ಪರ್ಯಾಯ ಕ್ರಮ ಕೈಗೊಳ್ಳುತ್ತಾರೆ.

 

ತಜ್ಞರು ಹೇಳುವಂತೆ, ಪ್ರತಿಯೊಂದು ವಿಮಾನವೂ ಹೆಚ್ಚುವರಿ ಇಂಧನವನ್ನು ಹೊತ್ತಿರುತ್ತದೆ. ಅಗತ್ಯವಿದ್ದರೆ ಹೊರಟ ವಿಮಾನ ನಿಲ್ದಾಣಕ್ಕೆ ಹಿಂತಿರುಗಲು ಅಥವಾ ಸಮೀಪದ ಮತ್ತೊಂದು ವಿಮಾನ ನಿಲ್ದಾಣದಲ್ಲಿ ಇಳಿಯಲು ಸಾಕಷ್ಟು ಇಂಧನ ಹೊಂದಿರುತ್ತದೆ. ಪೈಲಟ್ ಮತ್ತು ನೆಲದ ನಿಯಂತ್ರಣಾಧಿಕಾರಿಗಳ ನಡುವೆ ನಿರಂತರ ಸಂಪರ್ಕ ನಡೆಯುತ್ತದೆ. ಎಲ್ಲಾ ಅಂಶಗಳನ್ನು ಪರಿಗಣಿಸಿ ಅಂತಿಮವಾಗಿ ಸುರಕ್ಷಿತ ನಿರ್ಧಾರ ಕೈಗೊಳ್ಳಲಾಗುತ್ತದೆ ಎನ್ನುತ್ತಾರೆ.

 

ಆತಂಕದ ಮೂಲ ಏನು? 
ಇತ್ತೀಚಿನ ದಿನಗಳಲ್ಲಿ ವಿಶ್ವದ ವಿವಿಧ ಭಾಗಗಳಲ್ಲಿ ನಡೆದ ವಿಮಾನಾಪಘಾತಗಳ ಸುದ್ದಿಗಳು ಜನರಲ್ಲಿ ಭಯವನ್ನು ಹೆಚ್ಚಿಸಿವೆ. ಅದರ ಪರಿಣಾಮವಾಗಿ ಸ್ವಲ್ಪ ಅಸ್ಥಿರತೆ ಕಂಡರೂ ಪ್ರಯಾಣಿಕರು ತೀವ್ರ ಆತಂಕಕ್ಕೆ ಒಳಗಾಗುತ್ತಾರೆ. ಆದರೆ ಸಾಮಾನ್ಯವಾಗಿ ಇಂತಹ ಕ್ರಾಸ್‌ವಿಂಡ್(Cross-Wind) ಸಮಸ್ಯೆಗಳು ತಾತ್ಕಾಲಿಕವಾಗಿದ್ದು, ಗಾಳಿ ತೀವ್ರತೆ ಕಡಿಮೆಯಾದ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತದೆ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

 

ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ವರದಿ ಆಗಿಲ್ಲ. ಪ್ರಯಾಣಿಕರನ್ನು ಸುರಕ್ಷಿತವಾಗಿ ಬೆಂಗಳೂರಿನಲ್ಲಿ ಇಳಿಸಿದ ಬಳಿಕ ಮುಂದಿನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ವಿಮಾನಯಾನದಲ್ಲಿ ಸುರಕ್ಷತೆ ಮೊದಲ ಆದ್ಯತೆಯಾಗಿದ್ದು, ಪೈಲಟ್‌ಗಳ ತಕ್ಷಣದ ಹಾಗೂ ಸೂಕ್ತ ನಿರ್ಧಾರವೇ ದೊಡ್ಡ ಅನಾಹುತವನ್ನು ತಪ್ಪಿಸಿದೆ ಎಂಬುದು ಸ್ಪಷ್ಟವಾಗಿದೆ.