ಮಂಗಳೂರು: ನಗರದ ಬಜಿಲಕೇರಿ ಪ್ರದೇಶದಲ್ಲಿ, ಬಂದರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಎರಡು ನೆರೆಹೊರೆಯ ಗುಂಪುಗಳ ನಡುವೆ ಮಧ್ಯಾಹ್ನದಲ್ಲೇ ಭೀಕರ ಘರ್ಷಣೆ ನಡೆದಿದ್ದು, ಮಹಿಳೆ ಸೇರಿದಂತೆ ಮೂವರು ಗಾಯಗೊಂಡ ಘಟನೆ ಆತಂಕ ಮೂಡಿಸಿದೆ.
ಸಣ್ಣ ವಿಷಯದಿಂದ ಆರಂಭವಾದ ವಾಗ್ವಾದ ಕ್ಷಣಾರ್ಧದಲ್ಲೇ ಹಿಂಸಾತ್ಮಕ ತಿರುವು ಪಡೆದಿದ್ದು, ಎರಡೂ ಗುಂಪಿನವರು ಪರಸ್ಪರ ಕತ್ತಿ ಹಾಗೂ ಕೋಲುಗಳನ್ನು ಬಳಸಿಕೊಂಡು ದಾಳಿ ನಡೆಸಿದರೆಂದು ಪೊಲೀಸರು ತಿಳಿಸಿದ್ದಾರೆ.
ಹಣಕಾಸು ಸಂಬಂಧಿತ ವೈಮನಸ್ಯ ಹಾಗೂ ಅನಧಿಕೃತ ಚಟುವಟಿಕೆಗಳ ಹಿನ್ನೆಲೆ ಈ ಘಟನೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಗಾಯಗೊಂಡವರನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಸ್ತೆಯಲ್ಲೇ ಕಲ್ಲು ತೂರಾಟ ಮತ್ತು ಆಯುಧ ಪ್ರದರ್ಶನ ಕಂಡುಬಂದಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಘಟನೆಯ ಬಳಿಕ ಎರಡೂ ಗುಂಪಿನ ಸದಸ್ಯರು ಪರಸ್ಪರ ಜೀವಭೀತಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಬಂದರ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಅನಿತಾ ನೀಡಿದ ದೂರಿನ ಆಧಾರದಲ್ಲಿ ಮಹೇಶ್ ಶೆಟ್ಟಿ, ಪ್ರೀತಮ್ ಶೆಟ್ಟಿ, ಮನೀಶ್ ಶೆಟ್ಟಿ ಮತ್ತು ಜಿತೇಶ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಸುನೀತಾ ಶೆಟ್ಟಿ ನೀಡಿದ ಪ್ರತಿದೂರು ಆಧಾರದಲ್ಲಿ ತೇಜಸ್, ಲೋಕೇಶ್ ಹಾಗೂ ಅನಿತಾ ವಿರುದ್ಧವೂ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದು, ಘಟನೆಯಲ್ಲಿ ಭಾಗಿಯಾಗಿರುವ ಇತರರನ್ನು ಪತ್ತೆಹಚ್ಚುವ ಕಾರ್ಯದಲ್ಲಿದ್ದಾರೆ.





