ಶಿವಮೊಗ್ಗ: ಹೊರಗಿನಿಂದ ನೋಡಲು ಸಾಮಾನ್ಯ ಯುವಕನಂತೆ ಕಾಣುತ್ತಿದ್ದ ವ್ಯಕ್ತಿಯೊಬ್ಬ, ವಿದೇಶದಲ್ಲಿ ಕುಳಿತು ದೇಶದೊಳಗೆ ಅತಿರೇಕದ ಜಾಲ ಬಲಪಡಿಸುತ್ತಿದ್ದ ವಿಚಾರ ಇದೀಗ ನ್ಯಾಯಾಲಯದ ತೀರ್ಪಿನಿಂದ ಬಹಿರಂಗವಾಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಅರಾಫತ್ ಅಲಿಗೆ ಎನ್‌ಐಎ ವಿಶೇಷ ನ್ಯಾಯಾಲಯ ಆರು ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.
2020ರಲ್ಲಿ ಪಶ್ಚಿಮ ಬಂಗಾಳದ ಮೂಲಕ ದೇಶ ತೊರೆದ ಅರಾಫತ್, ನಂತರ ವಿದೇಶದಲ್ಲೇ ತಲೆಮರೆಸಿಕೊಂಡಿದ್ದ. ಆದರೆ ಅಲ್ಲಿ ನಿಂತುಕೊಳ್ಳದೇ, ಶಿವಮೊಗ್ಗ ಮತ್ತು ಮಂಗಳೂರಿನಲ್ಲಿ ಐಸಿಸ್ ಪರ ಚಟುವಟಿಕೆಗಳನ್ನು ಚುರುಕುಗೊಳಿಸಲು ಮುಂದಾಗಿದ್ದ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಯುವಕರನ್ನು ತನ್ನ ಬಲೆಗೆ ಸೆಳೆಯಲು ಹಣಕಾಸು ನೆರವು ನೀಡುತ್ತಿದ್ದ ಆತ, ಕ್ರಿಪ್ಟೋ ಕರೆನ್ಸಿ ಮೂಲಕ ಹಣ ರವಾನಿಸಿ, ಸ್ಥಳೀಯವಾಗಿ ಅದನ್ನು ಪರಿವರ್ತಿಸಿ ಅತಿರೇಕ ಚಟುವಟಿಕೆಗಳಿಗೆ ಬಳಸುವ ವ್ಯವಸ್ಥೆ ನಿರ್ಮಿಸಿದ್ದಾನೆ ಎಂದು ಎನ್‌ಐಎ ತಿಳಿಸಿದೆ.
ಈ ಜಾಲದಲ್ಲಿ ಭಾಗಿಯಾಗಿದ್ದ ಮಾಝ್ ಮುನೀರ್ ಅಹ್ಮದ್ ಮತ್ತು ಸೈಯದ್ ಯಾಸಿನ್ ಅವರಿಗೆ ಈಗಾಗಲೇ ಶಿಕ್ಷೆ ವಿಧಿಸಲಾಗಿದ್ದು, ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲೂ ಈ ಜಾಲದ ನಂಟು ಬೆಳಕಿಗೆ ಬಂದಿದೆ. ಆ ಪ್ರಕರಣದಲ್ಲಿ ಬಂಧಿತನಾದ ಮೊಹಮ್ಮದ್ ಶಾರೀಕ್ ಕೂಡ ಇದೇ ಗುಂಪಿನ ಭಾಗವಾಗಿದ್ದನು ಎಂಬುದು ತನಿಖೆಯಿಂದ ಸ್ಪಷ್ಟವಾಗಿದೆ.
2022ರಲ್ಲಿ ಪ್ರಕರಣವನ್ನು ಎನ್‌ಐಎ ಕೈಗೆತ್ತಿಕೊಂಡ ಬಳಿಕ, ಶಿವಮೊಗ್ಗ ಮತ್ತು ಬೆಂಗಳೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಐಸಿಸ್ ನೆಟ್ವರ್ಕ್ ವಿಸ್ತರಿಸಿರುವುದು ಪತ್ತೆಯಾಯಿತು. ಒಟ್ಟು 12 ಮಂದಿಯನ್ನು ಬಂಧಿಸಿದ ಎನ್‌ಐಎ, ಈ ಜಾಲದ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಪ್ರಮುಖ ವ್ಯಕ್ತಿಗಳ ವಿರುದ್ಧ ಸಾಕ್ಷ್ಯಗಳನ್ನು ಸಂಗ್ರಹಿಸಿತು.
ಕೆನ್ಯಾದಲ್ಲಿದ್ದ ಅರಾಫತ್ ಅಲಿ 2023ರ ಸೆಪ್ಟೆಂಬರ್‌ನಲ್ಲಿ ದೆಹಲಿಗೆ ಆಗಮಿಸಿದ ವೇಳೆ ಅಧಿಕಾರಿಗಳ ಬಲೆಗೆ ಬಿದ್ದು ಬಂಧನಕ್ಕೊಳಗಾಗಿದ್ದ. ಭಾರತದಲ್ಲಿ ಐಸಿಸ್ ನೆಟ್ವರ್ಕ್ ಬೆಳೆಸಲು ಪ್ರಮುಖ ಪಾತ್ರವಹಿಸಿದ್ದಾನೆ ಎಂಬ ಆರೋಪವನ್ನು ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿತ್ತು.
ಇದೀಗ ನ್ಯಾಯಾಲಯದ ತೀರ್ಪು ಹೊರಬಂದಿರುವ ಹಿನ್ನೆಲೆ, ವಿದೇಶದಿಂದಲೇ ದೇಶದೊಳಗೆ ಅತಿರೇಕದ ಚಟುವಟಿಕೆಗಳನ್ನು ನಿಯಂತ್ರಿಸಲು ನಡೆದ ಪ್ರಯತ್ನಗಳಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ.





