ಬೆಳ್ತಂಗಡಿ: ತಾಲೂಕಿನ ಬಾಳಂಜ ಗ್ರಾಮದಲ್ಲಿರುವ ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ನಡೆದ ಘಟನೆಯೊಂದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ಬುಧವಾರ ರಾತ್ರಿ, ಅಜಯ್ ಎಂಬ ವ್ಯಕ್ತಿ ದೇವಾಲಯದ ಆವರಣಕ್ಕೆ ನುಗ್ಗಿ ದೇವರ ಮೂರ್ತಿಯನ್ನೇ ಧ್ವಂಸ ಮಾಡಿದ ಆರೋಪ ಕೇಳಿಬಂದಿದೆ.
ಸಾಕ್ಷಿಗಳ ಪ್ರಕಾರ, ಅಜಯ್ ತನ್ನ ಥಾರ್ ವಾಹನದಲ್ಲಿ ದೇವಾಲಯದ ಪಕ್ಕದಲ್ಲಿರುವ ಸುಬ್ರಹ್ಮಣ್ಯ ಭಟ್ ಅವರ ಮನೆಗೆ ಬಂದು, ‘ಎನನ್ ಬಚಾವ್ ಮಾಲ್ಪಿ’ ಎಂದು ಕೂಗುತ್ತಾ ಮನೆಯೊಳಗೆ ನುಗ್ಗಲು ಯತ್ನಿಸಿದ್ದಾನೆ. ಆತಂಕಗೊಂಡ ಮನೆಯವರು ಅವನನ್ನು ತರಾಟೆಗೆ ತೆಗೆದುಕೊಂಡು ಹಿಂದಕ್ಕೆ ಕಳುಹಿಸಿದ್ದಾರೆ.
ಆದರೆ ಅಲ್ಲಿ ನಿಂತಿಲ್ಲ ಈ ಘಟನೆ. ನಂತರ ಅಜಯ್ ದೇವಾಲಯದ ಜಲಕ ಕೆರೆಯೊಳಗೆ ಹಾರಿ, ಅಲ್ಲಿಂದಲೇ ದೇವಾಲಯದತ್ತ ಸಾಗಿದ್ದಾನೆ. ಕಂಬದ ಸಹಾಯದಿಂದ ಮೇಲಕ್ಕೆ ಏರಿ, ಹಂಚು ತೆಗೆಯುತ್ತಾ ಒಳನುಗ್ಗಿದ್ದಾನೆ. ಬಳಿಕ ಕೊಡಮನಿತ್ತಾಯ ದೈವದ ಗರ್ಭಗುಡಿಗೆ ಇಳಿದು, ಅಲ್ಲಿ ಇದ್ದ ಗಂಟೆಯನ್ನು ತೆಗೆದು ಮೇಲ್ಭಾಗದ ಬಳಿ ಇಟ್ಟಿದ್ದಾನೆ.
ಇದರ ಬಳಿಕ, ದೇವಾಲಯದ ತೀರ್ಥ ಮಂಟಪದ ಬಳಿ ಇರುವ ದೊಡ್ಡ ಗಂಟೆಯನ್ನು ಬಾರಿಸಿ, ಶ್ರೀ ಗೋಪಾಲಕೃಷ್ಣ ದೇವರ ಗರ್ಭಗುಡಿಗೆ ನುಗ್ಗಿ, ಮೂರ್ತಿಯನ್ನು ಕೆಳಗೆ ಎಸೆದು ಪುಡಿಗೈದಿದ್ದಾನೆ ಎಂದು ವರದಿಯಾಗಿದೆ. ಗರ್ಭಗುಡಿಯಲ್ಲಿ ಇದ್ದ ಪೂಜಾ ಸಾಮಗ್ರಿಗಳನ್ನೂ ಚದುರಿಸಿದ್ದಾನೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ವೇಣೂರು ಪೊಲೀಸರು ಅಜಯ್ ಅವರನ್ನು ವಿಚಾರಣೆ ನಡೆಸಿ, ಬರವಸೆಯ ಪತ್ರ ಪಡೆದು ಬಿಡುಗಡೆ ಮಾಡಿರುವುದಾಗಿ ತಿಳಿದುಬಂದಿದೆ. ಈ ಘಟನೆ ಗ್ರಾಮದ ಜನರಲ್ಲಿ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.





