ಬೆಂಗಳೂರು: Karnataka Bypoll Result 2026 - ರಾಜ್ಯ ರಾಜಕೀಯದ ಕುತೂಹಲ ಕೆರಳಿಸಿದ್ದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಇಂದು (ಮೇ 4, 2026) ನಡೆಯುತ್ತಿದ್ದು, ಆರಂಭಿಕ ಟ್ರೆಂಡ್‌ಗಳು ಹೊರಬೀಳುತ್ತಿವೆ. ಸದ್ಯದ ಮಾಹಿತಿ ಪ್ರಕಾರ, ಎರಡೂ ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ತೀವ್ರ ಪೈಪೋಟಿ ಕಂಡುಬರುತ್ತಿದೆ.
ದಾವಣಗೆರೆ ದಕ್ಷಿಣ: ಬಿಜೆಪಿಗೆ ಆರಂಭಿಕ ಮುನ್ನಡೆ
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯ ಟಿ. ಶ್ರೀನಿವಾಸ್ ದಾಸಕರಿಯಪ್ಪ ಅವರು ಆರಂಭಿಕ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ್ ಅವರಿಗಿಂತ ಮುನ್ನಡೆ ಸಾಧಿಸಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ಈ ಸ್ಥಾನವನ್ನು ಉಳಿಸಿಕೊಳ್ಳುವುದು ಕಾಂಗ್ರೆಸ್‌ಗೆ ಪ್ರತಿಷ್ಠೆಯ ವಿಷಯವಾಗಿದೆ. ಆದರೆ, ಇಲ್ಲಿ ಮುಸ್ಲಿಂ ಮತಗಳ ವಿಭಜನೆ ಮತ್ತು ಎಸ್‌ಡಿಪಿಐ (SDPI) ಪ್ರಭಾವ ಕಾಂಗ್ರೆಸ್‌ಗೆ ಸವಾಲಾಗಿ ಪರಿಣಮಿಸಿರುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬಾಗಲಕೋಟೆ: ಕಾಂಗ್ರೆಸ್ ಮುನ್ನಡೆ
ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರು ಬಿಜೆಪಿಯ ಹಿರಿಯ ನಾಯಕ ವೀರಣ್ಣ ಚರಂತಿಮಠ ಅವರಿಗಿಂತ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮಾಜಿ ಸಚಿವ ಎಚ್.ವೈ. ಮೇಟಿ ಅವರ ನಿಧನದಿಂದಾಗಿ ಇಲ್ಲಿ ಉಪಚುನಾವಣೆ ನಡೆದಿತ್ತು. ಅನುಕಂಪದ ಅಲೆ ಹಾಗೂ ಸಿಎಂ ಸಿದ್ದರಾಮಯ್ಯ ಅವರ ವರ್ಚಸ್ಸು ಇಲ್ಲಿ ಕೈ ಹಿಡಿಯುವ ಲಕ್ಷಣಗಳು ಗೋಚರಿಸುತ್ತಿವೆ.
ರಾಜಕೀಯ ಪ್ರತಿಷ್ಠೆಯ ಕಣ
ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಈ ಉಪಚುನಾವಣೆ ಫಲಿತಾಂಶವು ಅತ್ಯಂತ ಮಹತ್ವದ್ದಾಗಿದೆ. ಸಚಿವ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನ ರದ್ದತಿ ಹಾಗೂ ಆಡಳಿತ ವಿರೋಧಿ ಅಲೆಯ ನಡುವೆ ಈ ಫಲಿತಾಂಶವು ಸರ್ಕಾರದ ಭವಿಷ್ಯದ ದಿಕ್ಸೂಚಿಯಾಗಲಿದೆ.
ಒಟ್ಟಾರೆ, ದಾವಣಗೆರೆ ದಕ್ಷಿಣದಲ್ಲಿ : ಬಿಜೆಪಿಯ ಅಭ್ಯರ್ಥಿ ಅಭ್ಯರ್ಥಿ ಟಿ. ಶ್ರೀನಿವಾಸ್ ಗೆ ಮುನ್ನಡೆಯಾದರೆ, ಬಾಗಲಕೋಟೆ: ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಮುನ್ನಡೆಯಾಗಿದೆ. ಮಧ್ಯಾಹ್ನದ ವೇಳೆಗೆ ಸಂಪೂರ್ಣ ಚಿತ್ರಣ ಲಭ್ಯವಾಗುವ ನಿರೀಕ್ಷೆಯಿದೆ.





