ನವದೆಹಲಿ: ವರದಿಗಳ ಪ್ರಕಾರ, ಕಾಂಗ್ರೆಸ್ ಹೈಕಮಾಂಡ್ ಹಾಗೂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರ ನಡುವೆ ಉನ್ನತ ಮಟ್ಟದ ಮಾತುಕತೆಗಳು ನಡೆಯುತ್ತಿವೆ ಎನ್ನಲಾಗಿದೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಟಿಎಂಸಿಯ ಹಲವು ಶಾಸಕರು ಪಕ್ಷದ ನಾಯಕತ್ವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವರು ಬಂಡಾಯದ ಧೋರಣೆ ತಾಳಿದ್ದು, ಕೆಲವು ಸಂಸದರು ಹಾಗೂ ಹಿರಿಯ ನಾಯಕರು ಕೂಡ ಪಕ್ಷ ತೊರೆಯುವ ಪ್ರಕ್ರಿಯೆಯಲ್ಲಿರುವುದು ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಇದರ ಜೊತೆಗೆ, ಶರದ್ ಪವಾರ್ ಅವರ ಎನ್‌ಸಿಪಿ ಹಾಗೂ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ವೈಎಸ್‌ಆರ್ ಕಾಂಗ್ರೆಸ್ ಪಕ್ಷಗಳಿಗೂ ಕಾಂಗ್ರೆಸ್ ನಾಯಕತ್ವದಿಂದ ಆಹ್ವಾನ ಹೋಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದೇ ವೇಳೆ, ಶಿವಸೇನೆ (ಉದ್ಧವ್ ಠಾಕ್ರೆ ಬಣ) ನಾಯಕ ಸಂಜಯ್ ರಾವತ್ ಅವರು, ಹಿಂದೆ ಕಾಂಗ್ರೆಸ್‌ನಿಂದ ಬೇರ್ಪಟ್ಟ ಎಲ್ಲಾ ಪಕ್ಷಗಳು ಮತ್ತೆ ಕಾಂಗ್ರೆಸ್‌ಗೆ ಸೇರಿ ಬಿಜೆಪಿಯ ವಿರುದ್ಧ ಹೋರಾಟವನ್ನು ಬಲಪಡಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಇದು ಪ್ರಾಯೋಗಿಕವಾಗಿ ಸಾಧ್ಯವೇ? ಎಂಬುದು ಸದ್ಯದ ಕುತೂಹಲದ ಪ್ರಶ್ನೆ. ಹಲವು ವರ್ಷಗಳಿಂದ ಸ್ವತಂತ್ರವಾಗಿ ರಾಜ್ಯಗಳನ್ನು ಆಳಿರುವ ಪಕ್ಷಗಳು ಏಕಾಏಕಿ ರಾಷ್ಟ್ರೀಯ ಪಕ್ಷದಲ್ಲಿ ವಿಲೀನಗೊಳ್ಳುವುದು ಅಷ್ಟು ಸುಲಭದ ನಿರ್ಧಾರವಲ್ಲ.
ಒಂದು ವೇಳೆ ಇಂತಹ ವಿಲೀನಗಳು ನಡೆದರೆ, ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆಯೇ? ಸದ್ಯದ ರಾಜಕೀಯದಲ್ಲಿ ಇದು ಅತ್ಯಂತ ಕುತೂಹಲಕಾರಿ ಚರ್ಚೆಯ ವಿಷಯವಾಗಿದೆ.





