ನವದೆಹಲಿ: ಕರಾವಳಿ ಹಾಗೂ ಮಲೆನಾಡು ಭಾಗದ ಅಡಿಕೆ ಬೆಳೆಗಾರರನ್ನು ಕಾಡುತ್ತಿರುವ ‘ಹಳದಿ ಎಲೆ ರೋಗ’ ಮತ್ತು ‘ಎಲೆ ಚುಕ್ಕಿ ರೋಗ’ ಸಮಸ್ಯೆಗೆ ತುರ್ತು ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮನವಿ ಸಲ್ಲಿಸಿದ್ದಾರೆ.ಅಡಿಕೆ ಬೆಳೆಯ ಪ್ರಮುಖ ಜಿಲ್ಲೆಗಳಾದ ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಕೊಡಗು ಸೇರಿದಂತೆ ಹಲವು ಪ್ರದೇಶಗಳಲ್ಲಿ ಈ ರೋಗಗಳು ವ್ಯಾಪಕವಾಗಿ ಹರಡುತ್ತಿರುವುದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಪ್ರಸ್ತುತ ಹಳದಿ ಎಲೆ ರೋಗವು ಸುಮಾರು 16 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ವ್ಯಾಪಿಸಿದ್ದು, ಲಕ್ಷಾಂತರ ಅಡಿಕೆ ಬೆಳೆಗಾರರ ಜೀವನೋಪಾಯದ ಮೇಲೆ ಪರಿಣಾಮ ಬೀರಿದೆ. ‘ಫೈಟೋಪ್ಲಾಸ್ಮಾ’ ಸೋಂಕಿನಿಂದ ಉಂಟಾಗುವ ಈ ರೋಗಕ್ಕೆ ಶಾಶ್ವತ ಪರಿಹಾರ ಇನ್ನೂ ಲಭ್ಯವಾಗಿಲ್ಲ. ಆದರೆ ಐಸಿಎಆರ್‌ನ ಸಿಪಿಸಿಆರ್‌ಐ ಸಂಸ್ಥೆ ಅಭಿವೃದ್ಧಿಪಡಿಸಿರುವ ನಿರ್ವಹಣಾ ವಿಧಾನಗಳು ರೈತರಿಗೆ ಆಶಾದಾಯಕವಾಗಿವೆ ಎಂದು ಸಂಸದರು ತಿಳಿಸಿದ್ದಾರೆ.
ರೋಗ ಪತ್ತೆ ಹಾಗೂ ನಿರ್ವಹಣೆಗೆ ಪೂರಕವಾಗಿ ವಿಟ್ಲದಲ್ಲಿ ಆಧುನಿಕ ರೋಗನಿರ್ಣಯ ಪ್ರಯೋಗಾಲಯ ಸ್ಥಾಪನೆಯಾಗಿದ್ದು, ಹಳದಿ ಎಲೆ ರೋಗವನ್ನು ತಡೆದುಕೊಳ್ಳಬಲ್ಲ ಅಡಿಕೆ ಗಿಡಗಳ ಅಂಗಾಂಶ ಕೃಷಿ ತಂತ್ರಜ್ಞಾನದಲ್ಲಿಯೂ ಯಶಸ್ಸು ದೊರೆತಿದೆ. ಈ ಹಿನ್ನೆಲೆಯಲ್ಲಿ ಸುಧಾರಿತ ತಂತ್ರಜ್ಞಾನ, ಹೈಟೆಕ್ ನೀರಾವರಿ ವ್ಯವಸ್ಥೆ ಹಾಗೂ ಸಮತೋಲಿತ ಪೋಷಕಾಂಶ ನಿರ್ವಹಣಾ ಕ್ರಮಗಳನ್ನು ರೈತರು ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರದಿಂದ ವಿಶೇಷ ಆರ್ಥಿಕ ಮತ್ತು ಸಾಂಸ್ಥಿಕ ನೆರವು ಅಗತ್ಯವಿದೆ ಎಂದು ಅವರು ಒತ್ತಾಯಿಸಿದ್ದಾರೆ. ಬಾಧಿತ ರೈತರಿಗೆ ಸಮಗ್ರ ನೆರವು ಪ್ಯಾಕೇಜ್ ಘೋಷಿಸುವಂತೆ ಸಚಿವರಲ್ಲಿ ಮನವಿ ಮಾಡಿದ್ದಾರೆ.
ಇದೇ ವೇಳೆ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ವೇಗವಾಗಿ ಹರಡುತ್ತಿರುವ ಎಲೆ ಚುಕ್ಕಿ ರೋಗದ ಸಮಸ್ಯೆಯನ್ನೂ ಸಂಸದರು ಕೇಂದ್ರದ ಗಮನಕ್ಕೆ ತಂದಿದ್ದಾರೆ. 2023ರಲ್ಲಿ ಸಿಪಿಸಿಆರ್‌ಐ ತಜ್ಞರ ಸಮಿತಿಯ ವರದಿಯನ್ನು ಆಧರಿಸಿ ಕೇಂದ್ರ ಸರ್ಕಾರ ವೈಜ್ಞಾನಿಕ ನಿರ್ವಹಣಾ ಮಾರ್ಗಸೂಚಿಗಳನ್ನು ರೂಪಿಸಿತ್ತು. ಆಗ ಕೇಂದ್ರ ಕೃಷಿ ಸಹಾಯಕ ಸಚಿವೆಯಾಗಿದ್ದ ಶೋಭಾ ಕರಂದ್ಲಾಜೆ ಅವರ ಅವಧಿಯಲ್ಲಿ 60:40 ಅನುಪಾತದ ಅನುದಾನದಡಿ ₹225 ಕೋಟಿ ಮಂಜೂರಾಗಿತ್ತು.
ಆದರೆ ಈ ಅನುದಾನವನ್ನು ‘ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಆಫ್ ಹಾರ್ಟಿಕಲ್ಚರ್’ (MIDH) ಯೋಜನೆಯ ಮಾರ್ಗಸೂಚಿಗಳಿಗೆ ಜೋಡಿಸಲಾಗಿತ್ತು. ಅದರ ಪ್ರಕಾರ ಸಸ್ಯ ಸಂರಕ್ಷಣೆಗೆ ಪ್ರತಿ ಹೆಕ್ಟೇರ್‌ಗೆ ₹1,500 ಮಿತಿಯ ವೆಚ್ಚವಷ್ಟೇ ಅನುಮತಿಸಲಾಗಿತ್ತು. ಆದರೆ ಸಿಪಿಸಿಆರ್‌ಐ ಶಿಫಾರಸು ಮಾಡಿದ ಸಮಗ್ರ ರೋಗ ನಿಯಂತ್ರಣ ಕ್ರಮಗಳ ವೆಚ್ಚ ಈ ಮಿತಿಗಿಂತ ಸಾಕಷ್ಟು ಹೆಚ್ಚಾಗಿದ್ದ ಕಾರಣ ಅನುದಾನವನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗಿರಲಿಲ್ಲ. ಪರಿಣಾಮವಾಗಿ 2023ರಲ್ಲಿ ಬಿಡುಗಡೆಯಾದ ಅನುದಾನ ಸರ್ಕಾರಕ್ಕೆ ಮರಳಿತ್ತು.
ಈ ಹಿನ್ನೆಲೆಯಲ್ಲಿ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ವಿಶೇಷ ವಿನಾಯಿತಿ ನೀಡುವ ಮೂಲಕ ಎಂಐಡಿಹೆಚ್ ವೆಚ್ಚದ ಮಿತಿಯನ್ನು ಸಡಿಲಗೊಳಿಸಿ, ಹಿಂದಿನ ಅನುದಾನವನ್ನು ಮರುಬಿಡುಗಡೆ ಮಾಡಬೇಕು ಎಂದು ಬ್ರಿಜೇಶ್ ಚೌಟ ಅವರು ಮನವಿ ಮಾಡಿದ್ದಾರೆ. ಸಿಪಿಸಿಆರ್‌ಐ ಶಿಫಾರಸು ಮಾಡಿದ ನೈಜ ವೆಚ್ಚಕ್ಕೆ ಅನುಗುಣವಾಗಿ ಆರ್ಥಿಕ ನೆರವು ಒದಗಿಸಿದರೆ ಮಾತ್ರ ರೋಗ ನಿಯಂತ್ರಣ ಕಾರ್ಯಕ್ರಮ ಯಶಸ್ವಿಯಾಗುವುದಲ್ಲದೆ ಅಡಿಕೆ ಕ್ಷೇತ್ರದ ಭವಿಷ್ಯವನ್ನು ಕೂಡ ರಕ್ಷಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.





