22 June 2026 |

ರಾಜ್ಯ ಮಟ್ಟದ ಸಾಧನೆ ಮಾಡಿದ್ದ ಸುಳ್ಯದ ವಿದ್ಯಾರ್ಥಿನಿ ಅಭಿಜ್ಞಾ ಭಟ್ ಅಕಾಲಿಕ ನಿಧನ

  • 12 Jun 2026 02:44:03 AM

ಸುಳ್ಯ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದು ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದ ಸುಳ್ಯದ ವಿದ್ಯಾರ್ಥಿನಿ ಅಭಿಜ್ಞಾ ಭಟ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳವಾರ (ಜೂನ್ 10) ನಿಧನರಾಗಿದ್ದಾರೆ. ಅವರಿಗೆ 19 ವರ್ಷ ವಯಸ್ಸಾಗಿತ್ತು.

 

ಸುಳ್ಯದ ಹೆಸರಾಂತ ಇಎನ್‌ಟಿ ತಜ್ಞರಾದ ಡಾ. ರವಿಶಂಕರ್ ಅವರ ಪುತ್ರಿಯಾಗಿದ್ದ ಅಭಿಜ್ಞಾ, ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಅಸ್ವಸ್ಥಗೊಂಡ ಕಾರಣ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ವಿಧಿವಶರಾದರು.

 

ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದ ಅಭಿಜ್ಞಾ, ಇತ್ತೀಚೆಗೆ ನಡೆದ ಪಿಯುಸಿ ಪರೀಕ್ಷೆಯಲ್ಲಿ 596 ಅಂಕಗಳನ್ನು ಪಡೆದು ತಾಲೂಕಿನಲ್ಲಿ ಪ್ರಥಮ ಸ್ಥಾನ ಗಳಿಸಿದ್ದರು. ಜೊತೆಗೆ ರಾಜ್ಯ ಮಟ್ಟದಲ್ಲಿ ನಾಲ್ಕನೇ ಸ್ಥಾನ ಪಡೆದು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು.

 

ಆರಂಭಿಕ ಫಲಿತಾಂಶದಲ್ಲಿ ಹಿಂದಿ ವಿಷಯದಲ್ಲಿ 98 ಅಂಕ ಪಡೆದಿದ್ದ ಅವರು, ಮರುಮೌಲ್ಯಮಾಪನದ ನಂತರ 99 ಅಂಕಗಳನ್ನು ಗಳಿಸಿದ್ದರು. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರ ವಿಷಯಗಳಲ್ಲಿ ತಲಾ 100 ಅಂಕಗಳನ್ನು ಪಡೆದು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದರು.

 

ಇದೇ ವೇಳೆ ಜೆಇಇ ಮೈನ್ಸ್ ಪರೀಕ್ಷೆಯಲ್ಲೂ ಶೇ. 94.29 ಅಂಕಗಳನ್ನು ಗಳಿಸಿ ಉನ್ನತ ಶಿಕ್ಷಣದತ್ತ ಭರವಸೆಯ ಹೆಜ್ಜೆ ಇಟ್ಟಿದ್ದರು. ಅವರ ಶೈಕ್ಷಣಿಕ ಸಾಧನೆ ವಿದ್ಯಾರ್ಥಿ ಸಮುದಾಯಕ್ಕೆ ಮಾದರಿಯಾಗಿತ್ತು.

 

ಅಭಿಜ್ಞಾ ಅವರು ತಂದೆ ಡಾ. ರವಿಶಂಕರ್, ತಾಯಿ ಅನುಪಮಾ ಹಾಗೂ ಸಹೋದರಿ ಅನುಜ್ಞಾ ಅವರನ್ನು ಅಗಲಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿನಿಯ ಅಕಾಲಿಕ ನಿಧನದಿಂದ ಕುಟುಂಬಸ್ಥರು, ಬಂಧುಗಳು, ಸ್ನೇಹಿತರು ಮತ್ತು ಶಿಕ್ಷಣ ಕ್ಷೇತ್ರದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.