13 June 2026 |

ಯೂರಿಯಾ ಅಕ್ರಮ ವ್ಯವಹಾರ - ವಿಟ್ಲ ಪೊಲೀಸರ ಬ್ರೇಕ್: ಬೊಳಂತೂರಿನಲ್ಲಿ 632 ಚೀಲಗಳ ಜಪ್ತಿ

  • 12 Jun 2026 02:08:04 PM

ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಳ್ಳಾಡು ಬೊಳಂತೂರು ಗ್ರಾಮದಲ್ಲಿ ಯೂರಿಯಾ ರಸಗೊಬ್ಬರದ ಅಕ್ರಮ ಮರುಪೊಟ್ಟಣಿಕೆ ನಡೆಯುತ್ತಿದ್ದ ಪ್ರಕರಣವನ್ನು ವಿಟ್ಲ ಪೊಲೀಸರು ಬಯಲಿಗೆಳೆದಿದ್ದಾರೆ. ಕಾರ್ಯಾಚರಣೆಯಲ್ಲಿ ನೂರಾರು ಚೀಲಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸಂಬಂಧಿಸಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.

 

ಜೂನ್ 11ರಂದು ಸಂಜೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ ವಿಟ್ಲ ಪೊಲೀಸ್ ಠಾಣೆಯ ನಿರೀಕ್ಷಕ ಪ್ರಕಾಶ್ ದೇವಾಡಿಗ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿತು. ಈ ವೇಳೆ ಮೊಹಮ್ಮದ್ ಅಶ್ರಫ್ ಎಂಬಾತ ಕೃಷಿ ಕ್ಷೇತ್ರಕ್ಕೆ ಮೀಸಲಾಗಿರುವ ಯೂರಿಯಾ ರಸಗೊಬ್ಬರವನ್ನು ಕೈಗಾರಿಕಾ ಬಳಕೆಯ ತಾಂತ್ರಿಕ ಗ್ರೇಡ್ ಚೀಲಗಳಲ್ಲಿ ತುಂಬಿ ಮಾರಾಟ ಮಾಡುತ್ತಿರುವುದು ಪತ್ತೆಯಾಯಿತು.

 

ತನಿಖೆಯ ವೇಳೆ ಸುಮಾರು 632 ಚೀಲಗಳಷ್ಟು ರಸಗೊಬ್ಬರವನ್ನು ಅಕ್ರಮವಾಗಿ ಮರುಪೊಟ್ಟಣಿಕೆ ಮಾಡಿರುವುದು ಬೆಳಕಿಗೆ ಬಂದಿದೆ. ಬಳಿಕ ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಕೃಷಿ ಅಧಿಕಾರಿ ನಂದನ ಶೆಣೈ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.

 

ಅಧಿಕಾರಿಗಳ ದೂರಿನ ಆಧಾರದಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆ, 1955ರ ವಿವಿಧ ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಸಂಗ್ರಹಿಸುವ ಕಾರ್ಯ ಮುಂದುವರಿದಿದೆ.

 

ಕೃಷಿ ಬಳಕೆಯ ರಸಗೊಬ್ಬರವನ್ನು ಬೇರೆ ಉದ್ದೇಶಕ್ಕಾಗಿ ಮರುಪೊಟ್ಟಣಿಕೆ ಮಾಡಿ ಮಾರುಕಟ್ಟೆಗೆ ಪೂರೈಸುತ್ತಿದ್ದ ಜಾಲ ಪತ್ತೆಯಾಗಿರುವುದು ಕೃಷಿಕರು ಹಾಗೂ ಕೃಷಿ ಇಲಾಖೆಯ ಗಮನ ಸೆಳೆದಿದೆ.