ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಜೂನ್ ತಿಂಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಕಳೆದ 21 ದಿನಗಳ ಅವಧಿಯಲ್ಲಿ ಭಕ್ತರಿಂದ ಒಟ್ಟು ₹3.72 ಕೋಟಿ ಕಾಣಿಕೆ ಸಂಗ್ರಹವಾಗಿದೆ.
ಪ್ರತಿ ತಿಂಗಳಂತೆ ಈ ಬಾರಿಯೂ ಸಾವಿರಾರು ಭಕ್ತರು ಮಠಕ್ಕೆ ಭೇಟಿ ನೀಡಿ ತಮ್ಮ ಭಕ್ತಿಭಾವದ ಕಾಣಿಕೆ ಸಲ್ಲಿಸಿದ್ದಾರೆ. ಹುಂಡಿ ಎಣಿಕೆಯ ವೇಳೆ ₹3,61,40,030 ಮೌಲ್ಯದ ಕರೆನ್ಸಿ ನೋಟುಗಳು ಹಾಗೂ ₹11,02,500 ಮೌಲ್ಯದ ನಾಣ್ಯಗಳು ಪತ್ತೆಯಾಗಿವೆ.
ಇದರ ಜೊತೆಗೆ ಭಕ್ತರು 67 ಗ್ರಾಂ ಚಿನ್ನ ಮತ್ತು 511 ಗ್ರಾಂ ಬೆಳ್ಳಿಯನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ. ಮಠದಲ್ಲಿ ನಡೆದ ಹುಂಡಿ ಎಣಿಕೆ ಪ್ರಕ್ರಿಯೆಯಲ್ಲಿ ನೂರಾರು ಸಿಬ್ಬಂದಿ, ಕರಸೇವಕರು ಹಾಗೂ ಭಜನಾ ಮಂಡಳಿಯ ಸದಸ್ಯರು ಭಾಗವಹಿಸಿದರು.
ಎಣಿಕೆ ಕಾರ್ಯದ ವೇಳೆ ಮುಜರಾಯಿ ಇಲಾಖೆ ಅಧಿಕಾರಿಗಳು ಮತ್ತು ಮಠದ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದು, ಸಂಪೂರ್ಣ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ನಡೆಸಿದರು.





