ಚೀನಾದ ಮೇಲಿನ ಸುಂಕವನ್ನು 104% ಗೆ ಏರಿಸಿದ ಟ್ರಂಪ್ : ಕೊನೆಯ ತನಕ ಹೋರಾಟ ಎಂದ ಡ್ರ್ಯಾಗನ್

  • 09 Apr 2025 01:03:49 AM
* ಚೀನಾಕ್ಕೆ ಅಮೇರಿಕಾ ಎರಡನೇ ಭಾರಿ 50% ಸುಂಕ ವಿಧಿಸಿದೆ.
* ಒಟ್ಟು 104% ಸುಂಕಕ್ಕೆ ಏರಿಕೆ.
* ಕೊನೆಯ ತನಕ ಹೋರಾಟ ಎಂದ ಚೀನಾ.
 
 

US Tariff 2025 : ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ವಿರುದ್ಧ ಎರಡನೇ ಬಾರಿಗೆ ಸುಂಕ ಹೇರುವ ಮೂಲಕ ಒಟ್ಟು 104% ಸುಂಕ ವಿಧಿಸಿದ್ದಾರೆ. ಇತ್ತೀಚಿಗೆ ನಡೆಯುತ್ತಿರುವ ವ್ಯಾಪಾರ ಯುದ್ಧದ (Trade war) ನಾಟಕೀಯ ಉಲ್ಬಣದಲ್ಲಿ, ಏಪ್ರಿಲ್ 8 ರ ಮಂಗಳವಾರ ಮಧ್ಯರಾತ್ರಿಯಿಂದ ಎಲ್ಲಾ ಚೀನೀ ಸರಕುಗಳ ಮೇಲೆ ಅಮೇರಿಕವು 104% ರಷ್ಟು ಸುಂಕವನ್ನು ವಿಧಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

 

ಚೀನಾ ಸೇರಿದಂತೆ ಇತರ ದೇಶಗಳು ಅಮೇರಿಕಾದ ಆರ್ಥಿಕತೆಗೆ ಹಾನಿಯಾಗುವಂತೆ ವ್ಯಾಪಾರ ಅಸಮತೋಲನವನ್ನು ಬಳಸಿಕೊಳ್ಳುತ್ತಿವೆ ಆದ್ದರಿಂದ ಹೊಸ ಸುಂಕಗಳು "ಸಮತಲೀಕರಣ"ದ ಗುರಿಯನ್ನು ಹೊಂದಿವೆ ಎಂದು ಟ್ರಂಪ್ ಆಡಳಿತ ಹೇಳಿಕೊಂಡಿದೆ. ಈ ಹಿಂದೆ ಅಮೇರಿಕಾವು ಚೀನಾಕ್ಕೆ 54% ಸುಂಕ ವಿಧಿಸಿತ್ತು ಈಗ ಮತ್ತೊಮ್ಮೆ 50% ಹೆಚ್ಚು ಸುಂಕ ಹೆಚ್ಚಿಸಿದರ ಪರಿಣಾಮ ಒಟ್ಟು 104% ರಷ್ಟು ಸುಂಕ ವಿಧಿಸಿದಂತಾಗುತ್ತದೆ. ಈ ಕ್ರಮವು ಮಂಗಳವಾರ ಮದ್ಯ ರಾತ್ರಿಯಿಂದಲೇ ಜಾರಿಯಾಗಲಿದೆ ಎಂದು ಶ್ವೇತಭವನ ಖಚಿತಪಡಿಸಿದೆ.

 

ಸುಂಕದ ವ್ಯಾಪಾರ ಯುದ್ಧ

ಡೊನಾಲ್ಡ್ ಟ್ರಂಪ್ ಭಾರತ ಸೇರಿದಂತೆ ವಿಶ್ವದ ಹಲವಾರು ದೇಶಕ್ಕೆ ಸುಂಕ ವಿಧಿಸಿದೆ ಮತ್ತು ಚೀನಾಕ್ಕೆ 54% ಸುಂಕ ವಿಧಿಸಿತ್ತು. ಇದಕ್ಕೆ ಪ್ರತಿಕಾರವಾಗಿ ಚೀನಾ ಅಮೇರಿಕಾದ ಮೇಲೆ 34% ಸುಂಕ ವಿಧಿಸಿತ್ತು. ಇದರಿಂದ ಕೆರಳಿದ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೇರಿಕಾದ ವಿರುದ್ಧ ಹೇರಿರುವ 34% ಸುಂಕವನ್ನು ಹಿಂಪಡೆಯದೆ ಇದ್ದರೆ ಚೀನಾದ ಆಮದುಗಳ ಮೇಲೆ ಹೆಚ್ಚಿನ ಸುಂಕ ವಿಧಿಸುವುದಾಗಿ ಎಚ್ಚರಿಕೆ ನೀಡಿತ್ತು. ಆದರೆ ಮಂಗಳವಾರ ದಿಡೀರನೆ ಟ್ರಂಪ್ ಸರಕಾರ ಹೆಚ್ಚಿನ 50% ಸುಂಕ ವಿಧಿಸುವುದರ ಮೂಲಕ ಚೀನಾ ವಿರುದ್ಧ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಮುಗಿಬಿದ್ದಿದ್ದಾರೆ.

 

ಸುಂಕದ ವಿಷಯದಲ್ಲಿ ಇತರ ದೇಶಗಳು ಬಯಸಿದರೆ ಮಾತುಕತೆ - ಟ್ರಂಪ್

ಸುಂಕದ ವಿಷಯದಲ್ಲಿ ಪರಸ್ಪರ ಇತರ ದೇಶಗಳು ಬಯಸಿದರೆ ಅಮೇರಿಕಾ ಮಾತುಕತೆಗೆ ಸಿದ್ಧವಿದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದರು. ಯಾವುದೇ ದೇಶ ಹೆಚ್ಚುವರಿ ಸುಂಕ ವಿಧಿಸಿದರೆ ತಕ್ಷಣ ಹೊಸ ಮತ್ತು ಗಣನೀಯವಾಗಿ ಹೆಚ್ಚಿನ ಸುಂಕಗಳನ್ನು ಎದುರಿಸಬೇಕಾಗುತ್ತದೆ ಎಂಬ ತನ್ನ ಎಚ್ಚರಿಕೆಯ ಮಾತನ್ನು ಕೂಡಾ ಘೋಷಿಸಿದ್ದರು. ಇದರ ಹೊರತಾಗಿಯೂ ಚೀನಾವು ಪ್ರತೀಕಾರ ಸುಂಕ ವಿಧಿಸಿದ್ದಕ್ಕಾಗಿ ಚೀನಾವನ್ನು ತರಾಟೆಗೆತ್ತಿಕೊಂಡ ಟ್ರಂಪ್, ಚೀನಾದೊಂದಿಗಿನ ಎಲ್ಲಾ ಮಾತುಕತೆಗಳನ್ನೂ ಕೊನೆಗೊಳಿಸಲಾಗುವುದು ಮತ್ತು ಇತರ ದೇಶಗಳೊಂದಿಗೆ ಮಾತುಕತೆ ತಕ್ಷಣ ಪ್ರಾರಂಭಿಸಲಾಗುವುದು ಎಂದರು.

 

ಯಾವ ವಸ್ತುಗಳಿಗೆ ಸುಂಕ ಬೀಳಲಿದೆ? 

ಎಲೆಕ್ಟ್ರಾನಿಕ್ಸ್: ಸ್ಮಾರ್ಟ್‌ಫೋನ್‌ಗಳು, ಕಂಪ್ಯೂಟರ್‌ಗಳು ಮತ್ತು ಟೆಲಿವಿಷನ್‌ಗಳಂತಹವು.

ಗ್ರಾಹಕ ಸರಕುಗಳು: ಉಡುಪುಗಳು, ಪಾದರಕ್ಷೆಗಳು ಮತ್ತು ಗೃಹೋಪಯೋಗಿ ವಸ್ತುಗಳು ಸೇರಿದಂತೆ.

ಕೈಗಾರಿಕಾ ಘಟಕಗಳು: ಯಂತ್ರೋಪಕರಣಗಳ ಭಾಗಗಳು ಮತ್ತು ಉತ್ಪಾದನಾ ಉಪಕರಣ.

ಆಟೋಮೊಬೈಲ್‌ಗಳು: ವಿಶೇಷವಾಗಿ ಚೀನೀ ನಿರ್ಮಿತ ಭಾಗಗಳೊಂದಿಗೆ ಜೋಡಿಸಲಾದ ಅಥವಾ ತಯಾರಿಸಿದ ವಾಹನಗಳು.

 

ಕೊನೆಯವರೆಗೂ ಹೋರಾಟ ಎಂದ ಚೀನಾ

ಚೀನಾದ ಆಮದುಗಳ ಮೇಲಿನ ಒಟ್ಟು 104% ಸುಂಕ ಬಹಳ ಮಹತ್ತರ ಬೆಳವಣಿಗೆಗೆ ಕಾರಣವಾಗಲಿದೆ. ಇದು ಎರಡು ಆರ್ಥಿಕ ಶಕ್ತಿಗಳ ನಡುವೆ ಈಗಾಗಲೇ ಉದ್ವಿಗ್ನವಾಗಿರುವ ವ್ಯಾಪಾರ ಬಿಕ್ಕಟ್ಟನ್ನು ಹೆಚ್ಚಿಸುತ್ತದೆ. ವಾಷಿಂಗ್ಟನ್ ಸುಂಕ ಹೆಚ್ಚಳವನ್ನು ಇದೇ ರೀತಿ ಮುಂದುವರಿಸಿದರೆ ಹೋರಾಟವನ್ನು ನಿಲ್ಲಿಸುವುದಿಲ್ಲ ಮತ್ತು ನಮ್ಮ ಹೋರಾಟ ಕೊನೆಯವರೆಗೆ ಇರಲಿದೆ ಎಂದು ಬೀಜಿಂಗ್ ಎಚ್ಚರಿಸಿದೆ.

 

ಭಾರತಕ್ಕೆ 26% ಸುಂಕ ವಿಧಿಸಿರುವ ಅಮೆರಿಕಾ

ಅಮೇರಿಕಾ ಭಾರತಕ್ಕೆ 26% ಸುಂಕ ವಿಧಿಸಿತ್ತು, ಜಾಗತಿಕ ಐಫೋನ್ ಉತ್ಪಾದನೆಯಲ್ಲಿ ಭಾರತ 14% ಪಾಲು ಹೊಂದಿದೆ. ಇದೆ ಸಂದರ್ಭದಲ್ಲಿ, ಚೀನಾಕ್ಕೆ 54% ಹಾಗೂ ವಿಯೆಟ್ನಾಂಗೆ 46% ಸುಂಕ ವಿಧಿಸಿತ್ತು. ಭಾರತದ ವಿದೇಶಾಂಗ ಸಚಿವಾಲಯ ಅಮೇರಿಕಾದ ಜೊತೆ ಮುಂದಿನ ದಿನಗಳಲ್ಲಿ ಮಾತುಕತೆ ನಡೆಸಲಿದ್ದೇವೆ ಎಂದು ತಿಳಿಸಿತ್ತು. ಚೀನಾ ಮತ್ತು ವಿಯೆಟ್ನಾಮ್ ದೇಶಕ್ಕೆ ಹೋಲಿಸಿದರೆ ಭಾರತಕ್ಕೆ ಕಡಿಮೆ ಸುಂಕ ವಿಧಿಸಲಾಗಿದೆ.