ಸಂಸ್ಕೃತದಲ್ಲಿ ಸಾಧನೆ ಮಾಡಿದ ಆಸಿಫಾ ಹುಸೈನ್ : 96 ಅಂಕ ಪಡೆದ ಪುತ್ತೂರಿನ ವಿದ್ಯಾರ್ಥಿನಿ

  • 09 Apr 2025 10:33:35 AM

ಪುತ್ತೂರು, ಏಪ್ರಿಲ್ 09 :  ಒಂದು ಕಡೆ ಸಂಸ್ಕೃತ ಭಾಷೆಯನ್ನು ದೇಶದ ಪ್ರತಿಯೊಬ್ಬ ಶಾಲಾ ಮಕ್ಕಳಿಗೆ ಕಲಿಸಬೇಕು ಎಂಬ ಒತ್ತಾಯವಿದ್ದರೆ, ಇನ್ನೊಂದು ಕಡೆ ಸಂಸ್ಕೃತ ಭಾಷೆಯನ್ನು ನಮ್ಮ ಧರ್ಮ ಒಪ್ಪುವುದಿಲ್ಲ ಎನ್ನುವ ವಾದ ಮಾಡುವ ಜನಗಳ ನಡುವೆ, ಒಬ್ಬ ಮುಸ್ಲಿಂ ವಿದ್ಯಾರ್ಥಿ ಸಂಸ್ಕೃತದಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಕೀರ್ತಿಗೆ ಪಾತ್ರಳಾಗಿದ್ದಾಳೆ.

 

ಬೆಂಗಳೂರಿನ ನಾರಾಯಣ ಟೆಕ್ನೋ ಸ್ಕೂಲ್ ನಲ್ಲಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿದ್ದ ಆಸಿಫಾ ಹುಸೈನ್ ಸಂಸ್ಕೃತವನ್ನು ಎರಡನೇ ಭಾಷೆಯನ್ನಾಗಿ ಆಯ್ಕೆ ಮಾಡಿದ್ದರು. ಇದೀಗ ಆಸಿಫಾ ಹುಸೈನ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಂಸ್ಕೃತದಲ್ಲಿ 100 ಕ್ಕೆ 96 ಅಂಕಗಳನ್ನು ಪಡೆಯುವ ಮೂಲಕ ಸಾಧನೆಗೈದಿದ್ದರೆ.

 

ಆಸಿಫಾ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನವರು ಎಂದು ತಿಳಿದುಬಂದಿದೆ. ಪೋಷಕರಾದ ಖೈರುನ್ನೀಸಾ ಮತ್ತು ಜಾಕಿರ್ ದಂಪತಿಯ ಪುತ್ರಿಯಾಗಿದ್ದು, ಪೋಷಕರು ಬೆಂಗಳೂರಿನ ಕೇಂದ್ರ ಸಂಪರ್ಕ ಇಲಾಖೆಯಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ವರದಿಯಾಗಿದೆ.

 

ಇಂದು ಧರ್ಮ, ಜಾತಿ, ಅಥವಾ ಯಾವುದೇ ಶ್ರೇಣಿಯನ್ನು ಮೀರಿ, ಎಷ್ಟೇ ಕಠಿಣ ಸಮಯದಲ್ಲಿ ಇದ್ದರೂ, ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ಅನುಸರಿಸಿ ಸಾಧನೆಗಳನ್ನು ಸಾಧಿಸಬಹುದು ಎಂಬುದನ್ನು ಈ ಸಾಧನೆ ಸಾಬೀತು ಮಾಡುತ್ತದೆ.