01 July 2026 |

36 ವರ್ಷಗಳ ಬಳಿಕ ಸರಳಾ ಭಟ್ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಯಾಸಿನ್ ಮಲಿಕ್ ಸೇರಿ ಐವರ ವಿರುದ್ಧ ಚಾರ್ಜ್‌ಶೀಟ್

  • 30 Jun 2026 12:09:54 PM

ಕಾಶ್ಮೀರ: ಮೂರು ದಶಕಗಳಿಗೂ ಹೆಚ್ಚು ಕಾಲ ತನಿಖೆಯಲ್ಲಿದ್ದ ಕಾಶ್ಮೀರಿ ಪಂಡಿತೆ ಹಾಗೂ ನರ್ಸ್ ಸರಳಾ ಭಟ್ ಅಪಹರಣ, ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಸುಮಾರು 36 ವರ್ಷಗಳ ಬಳಿಕ ಜಮ್ಮು-ಕಾಶ್ಮೀರ ರಾಜ್ಯ ತನಿಖಾ ಸಂಸ್ಥೆ (ಎಸ್‌ಐಎ) ಉಗ್ರ ಯಾಸಿನ್ ಮಲಿಕ್ ಸೇರಿದಂತೆ ಐವರ ವಿರುದ್ಧ ಶ್ರೀನಗರದ ವಿಶೇಷ ನ್ಯಾಯಾಲಯಕ್ಕೆ 737 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದೆ.

 

1990ರ ದಶಕದ ಆರಂಭದಲ್ಲಿ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳು ತೀವ್ರಗೊಂಡಿದ್ದ ಸಮಯದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಸರಣಿ ದಾಳಿಗಳು ನಡೆದಿದ್ದವು. ಅನೇಕ ಮಂದಿ ತಮ್ಮ ಜೀವ ಉಳಿಸಿಕೊಳ್ಳಲು ಕಣಿವೆಯನ್ನು ತೊರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೇ ಅವಧಿಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಸರಳಾ ಭಟ್ ಅವರನ್ನು ಅಪಹರಿಸಿ, ಅತ್ಯಾಚಾರ ಎಸಗಿ ಬಳಿಕ ಹತ್ಯೆ ಮಾಡಲಾಗಿದೆ ಎಂಬ ಆರೋಪ ಪ್ರಕರಣದಲ್ಲಿದೆ.

 

ಎಸ್‌ಐಎ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಈ ಪ್ರಕರಣದ ಪ್ರಮುಖ ಸಂಚುಕೋರನಾಗಿ ಸದ್ಯ ಜೈಲಿನಲ್ಲಿರುವ ಯಾಸಿನ್ ಮಲಿಕ್ ಹೆಸರನ್ನು ಉಲ್ಲೇಖಿಸಲಾಗಿದೆ. ಜೊತೆಗೆ, ಸರಳಾ ಭಟ್ ಅವರ ಮೇಲೆ ನೇರವಾಗಿ ಗುಂಡು ಹಾರಿಸಿದ ಆರೋಪ ಹೊತ್ತಿರುವ ಖುರ್ಷಿದ್ ಅಹ್ಮದ್ ಚಾಲ್ಕೂ ಪ್ರಸ್ತುತ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.

 

ಇದೇ ಪ್ರಕರಣದಲ್ಲಿ ಅಬ್ದುಲ್ ಹಮೀದ್ ಶೇಖ್, ಮೊಹಮ್ಮದ್ ಯೂಸುಫ್ ಸೋಫಿ ಅಲಿಯಾಸ್ ಇದ್ರೀಸ್ ಹಾಗೂ ಗುಲಾಮ್ ಮೊಹಮ್ಮದ್ ತಪ್ಲೂ ಅವರ ವಿರುದ್ಧವೂ ಆರೋಪ ದಾಖಲಿಸಲಾಗಿದೆ. ಆದರೆ ಈ ಮೂವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

 

ದೀರ್ಘಕಾಲದ ಬಳಿಕ ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿರುವುದು ಕಾಶ್ಮೀರಿ ಪಂಡಿತರ ಮೇಲಿನ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಮುಖ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.