ದೆಹಲಿ, ಏಪ್ರಿಲ್ 09 : ಜರ್ಮನಿಯ ವಿರುದ್ಧದ ಎರಡನೇ ಮಹಾಯುದ್ಧದಲ್ಲಿ ಜಯಗಳಿಸಿದ್ದ ರಷ್ಯಾ ಈಗ 80 ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ.
ರಷ್ಯಾ ಈ ವಾರ್ಷಿಕೋತ್ಸವದ ಅಂಗವಾಗಿ ಮೇ 9 ರಂದು ನಡೆಯುವ ಕಾರ್ಯಕ್ರಮಗಳಿಗೆ ಭಾರತದ ಪ್ರಧಾನಿ ಮೋದಿಯವರನ್ನು ಆಹ್ವಾನಿಸಿದೆ. ಇದರ ಸಲುವಾಗಿ ರಷ್ಯಾದ ಉಪ ವಿದೇಶಾಂಗ ಸಚಿವ ಆಂಡ್ರೆ ರುಡೆಂಕೊ ಸಂದೇಶ ಹೊರಹಾಕಿದ್ದಾರೆ.
ಮೇ 9 ರ ಮೆರವಣಿಗೆಯಲ್ಲಿ ಭಾರತದ ಪ್ರಧಾನ ಮಂತ್ರಿಯವರ ಆಗಮನಕ್ಕಾಗಿ ಮಾಸ್ಕೋ ಕಾಯುತ್ತಿದೆ. ಆಹ್ವಾನವನ್ನು ಈಗಾಗಲೇ ಕಳುಹಿಸಲಾಗಿದ್ದು, ಭೇಟಿಯ ಕುರಿತು ಚಿಂತನೆ ನಡೆಯುತ್ತಿದೆ ಎಂದು ರುಡೆಂಕೊ ಹೇಳಿದ್ದಾರೆ ಎನ್ನುವ ನ್ಯೂಸ್ ರಷ್ಯಾದ ಮಾಧ್ಯಮಗಳು ವರದಿ ಮಾಡಿದೆ.
ಪ್ರಧಾನಿ ಮೋದಿ ಜುಲೈ 2024 ರಲ್ಲಿ ರಷ್ಯಾಕ್ಕೆ ಭೇಟಿ ನೀಡಿದ್ದರು. ಅದರ ಮೊದಲು 2019 ರಲ್ಲಿ ಆರ್ಥಿಕ ಸಮಾವೇಶದಲ್ಲಿ ಭಾಗವಹಿಸಲು ದೂರದ ಪೂರ್ವ ನಗರವಾದ ವ್ಲಾಡಿವೋಸ್ಟಾಕ್‌ಗೆ ಭೇಟಿ ನೀಡಿದ್ದರು.
ಭಾರತ ಮತ್ತು ರಷ್ಯಾದ ಸಂಬಂಧ ಎಷ್ಟು ಗಟ್ಟಿಯಾಗಿದೆಯೇ ಅಷ್ಟೇ ಬಲವಾದ ಸಂಬಂಧ ಮೋದಿ ಮತ್ತು ಪುಟಿನ್ ರವರದ್ದು. ಪುಟಿನ್ ಮತ್ತು ಪ್ರಧಾನಿ ಮೋದಿ ನಿಯಮಿತವಾಗಿ ಸಂಪರ್ಕದಲ್ಲಿದ್ದು, ಪ್ರತಿ ಎರಡು ತಿಂಗಳಿಗೊಮ್ಮೆ ದೂರವಾಣಿ ಸಂಭಾಷಣೆ ನಡೆಸುತ್ತಿದ್ದಾರೆ ಎನ್ನಲಾಗುತ್ತದೆ.
ಜನವರಿ 1945 ರಲ್ಲಿ, ಸೋವಿಯತ್ ಸೈನ್ಯವು ಜರ್ಮನಿಯ ವಿರುದ್ಧ ಆಕ್ರಮಣವನ್ನು ಪ್ರಾರಂಭಿಸಿತು. ಮೇ 9 ರಂದು ಕಮಾಂಡರ್-ಇನ್-ಚೀಫ್ ಜರ್ಮನಿಯ ಬೇಷರತ್ತಾದ ಶರಣಾಗತಿ ಕಾಯ್ದೆಗೆ ಸಹಿ ಹಾಕಿದರು, ಇದು ಯುದ್ಧವನ್ನು ಕೊನೆಗೊಳಿಸಿತು.
ರಷ್ಯಾದ ಪ್ರಧಾನಿ ಪುಟಿನ್ ರವರನ್ನು ಭಾರತಕ್ಕೆ ಆಹ್ವಾನಿಸಲಾಗಿದೆ. ಸರಿಯಾದ ದಿನ ನಿಗದಿಯಾದ ಮೇಲೆ ಪುಟಿನ್ ಭಾರತಕ್ಕೆ ಆಗಮಿಸಲಿದ್ದಾರೆ.