ನವದೆಹಲಿ: ಅಮರನಾಥ ಯಾತ್ರೆ ಆರಂಭವಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಶಿವಭಕ್ತರಿಗೆ ವಿಶೇಷ ಸಂದೇಶ ರವಾನಿಸಿ ಶುಭಾಶಯ ಕೋರಿದ್ದಾರೆ. ಭಗವಾನ್ ಅಮರನಾಥರ ಆಶೀರ್ವಾದದಿಂದ ಯಾತ್ರೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಭಕ್ತರ ಪ್ರಯಾಣ ಸುರಕ್ಷಿತ, ಸುಖಕರ ಹಾಗೂ ಯಶಸ್ವಿಯಾಗಿರಲಿ ಎಂದು ಹಾರೈಸಿದ್ದಾರೆ.
ತಮ್ಮ ಸಂದೇಶದಲ್ಲಿ ಅಮರನಾಥ ಯಾತ್ರೆಯು ಕೇವಲ ಧಾರ್ಮಿಕ ಆಚರಣೆಯಲ್ಲ, ಭಕ್ತಿ, ಆತ್ಮಾನುಭವ ಮತ್ತು ರಾಷ್ಟ್ರೀಯ ಏಕತೆಯನ್ನು ಪ್ರತಿಬಿಂಬಿಸುವ ಮಹತ್ವದ ಪಯಣವಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಯಾತ್ರೆಯನ್ನು ಸುಗಮವಾಗಿ ನಡೆಸಲು ಶ್ರಮಿಸುತ್ತಿರುವ ಭದ್ರತಾ ಸಿಬ್ಬಂದಿ, ಆಡಳಿತ ಯಂತ್ರ, ಆರೋಗ್ಯ ಸೇವಾ ಸಿಬ್ಬಂದಿ ಹಾಗೂ ಸ್ವಯಂಸೇವಕರ ಸೇವೆಯನ್ನು ಅವರು ಪ್ರಶಂಸಿಸಿದ್ದಾರೆ.
ಇದೇ ವೇಳೆ ಯಾತ್ರಿಕರು ಐದು ಪ್ರಮುಖ ಸಂಕಲ್ಪಗಳನ್ನು ಪಾಲಿಸುವಂತೆ ಪ್ರಧಾನಿ ಕರೆ ನೀಡಿದ್ದಾರೆ. ಯಾತ್ರೆಯ ಸಂದರ್ಭದಲ್ಲಿ ಸ್ವಚ್ಛತೆಯನ್ನು ಕಾಪಾಡಿ ಪರಿಸರವನ್ನು ಸಂರಕ್ಷಿಸಬೇಕು ಎಂದು ಮೊದಲ ಸಂಕಲ್ಪವಾಗಿ ಹೇಳಿದ್ದಾರೆ.
ಎರಡನೇ ಸಂಕಲ್ಪವಾಗಿ ಆಡಳಿತ ಮತ್ತು ಭದ್ರತಾ ಪಡೆಗಳು ನೀಡುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಸುರಕ್ಷಿತ ಯಾತ್ರೆ ನಡೆಸುವಂತೆ ಸಲಹೆ ನೀಡಿದ್ದಾರೆ.
ಮೂರನೇ ಸಂಕಲ್ಪವಾಗಿ ‘ವೋಕಲ್ ಫಾರ್ ಲೋಕಲ್’ ಅಭಿಯಾನಕ್ಕೆ ಬೆಂಬಲ ಸೂಚಿಸಿ, ಯಾತ್ರೆಗೆ ಖರ್ಚು ಮಾಡುವ ಮೊತ್ತದ ಕನಿಷ್ಠ 10 ಶೇಕಡಾವನ್ನು ಜಮ್ಮು-ಕಾಶ್ಮೀರದ ಸ್ಥಳೀಯ ಉತ್ಪನ್ನಗಳ ಖರೀದಿಗೆ ಬಳಸುವಂತೆ ಮನವಿ ಮಾಡಿದ್ದಾರೆ. ಇದರಿಂದ ಅಲ್ಲಿನ ಜನರ ಜೀವನೋಪಾಯಕ್ಕೆ ಉತ್ತೇಜನ ದೊರೆಯಲಿದೆ ಎಂದು ತಿಳಿಸಿದ್ದಾರೆ.
ನಾಲ್ಕನೇ ಸಂಕಲ್ಪವಾಗಿ ‘ಏಕ್ ಪೇಡ್ ಮಾಂ ಕೆ ನಾಮ್’ ಅಭಿಯಾನದಡಿ ಯಾತ್ರೆ ಪೂರ್ಣಗೊಂಡ ಬಳಿಕ ಒಂದು ಸಸಿ ನೆಟ್ಟು ಪರಿಸರ ಸಂರಕ್ಷಣೆಗೆ ಕೈಜೋಡಿಸುವಂತೆ ಕರೆ ನೀಡಿದ್ದಾರೆ.
ಐದನೇ ಸಂಕಲ್ಪವಾಗಿ ‘ನೇಷನ್ ಫಸ್ಟ್’ ಧ್ಯೇಯದೊಂದಿಗೆ ಪ್ರತಿಯೊಬ್ಬ ನಾಗರಿಕರು ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿ, ವಿಕಸಿತ ಭಾರತದ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.





