ವಿಟ್ಲ: ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಮುಗುಳಿ ಪ್ರದೇಶದಲ್ಲಿ ಅಕ್ರಮವಾಗಿ ಕೆಂಪುಕಲ್ಲು ಮತ್ತು ಮಣ್ಣು ಗಣಿಗಾರಿಕೆ ನಡೆಸಲಾಗುತ್ತಿದ್ದ ಸ್ಥಳದ ಮೇಲೆ ವಿಟ್ಲ ಪೊಲೀಸರು ದಾಳಿ ನಡೆಸಿ, ಗಣಿಗಾರಿಕೆಗೆ ಬಳಸಲಾಗಿದ್ದ ವಾಹನಗಳು ಹಾಗೂ ವಿವಿಧ ಯಂತ್ರೋಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಜುಲೈ 2ರ ಸಂಜೆ ವೇಳೆ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ರಾಮಕೃಷ್ಣ ಅವರಿಗೆ ವಿಶ್ವಾಸಾರ್ಹ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಠಾಣಾ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದಾಗ, ಪೊಲೀಸ್ ತಂಡ ಆಗಮಿಸುತ್ತಿರುವುದನ್ನು ಗಮನಿಸಿದ ಗಣಿಗಾರಿಕೆಯಲ್ಲಿ ತೊಡಗಿದ್ದವರು ಅಲ್ಲಿಂದ ಪರಾರಿಯಾಗಿದ್ದಾರೆ.
ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ ವೇಳೆ ಯಾವುದೇ ಅಧಿಕೃತ ಪರವಾನಗಿ ಪಡೆಯದೇ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಸಮೀಪದ ಪ್ರದೇಶದಲ್ಲಿ ಅಕ್ರಮ ಮಣ್ಣು ಗಣಿಗಾರಿಕೆಯೂ ನಡೆಯುತ್ತಿರುವುದು ಪತ್ತೆಯಾಗಿದೆ. ಮಣ್ಣು ಸಾಗಿಸುವ ಲಾರಿಗಳ ತೂಕ ಪರಿಶೀಲನೆಗಾಗಿ ನಿರ್ಮಿಸಲಾಗಿದ್ದ ವೇ-ಬ್ರಿಡ್ಜ್, ಕಟ್ಟಡ ಹಾಗೂ ಹಲವು ಯಂತ್ರೋಪಕರಣಗಳನ್ನೂ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ದಾಳಿಯ ವೇಳೆ ಸ್ಥಳದಲ್ಲಿದ್ದ ವಾಹನಗಳು, ಯಂತ್ರಗಳು ಮತ್ತು ಇತರೆ ಸಂಬಂಧಿತ ಸೊತ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದು, ಮುಂದಿನ ಕಾನೂನು ಪ್ರಕ್ರಿಯೆ ಆರಂಭಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಳಿಗದ್ದೆ ಝಕಾರಿಯಾ ಸೇರಿದಂತೆ ಇತರರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 148/2026 ದಾಖಲಿಸಲಾಗಿದೆ. BNS-2023ರ ಕಲಂ 303(2), MMDR ಕಾಯ್ದೆ-1957ರ ಕಲಂ 4(1) ಹಾಗೂ 21, ಜೊತೆಗೆ ಕರ್ನಾಟಕ ಮೈನರ್ ಮಿನರಲ್ ಕನ್ಸೆಷನ್ ರೂಲ್ಸ್-1994ರ ನಿಯಮ 3 ಮತ್ತು 44ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





