ಸುಳ್ಯ: ಹೊಸದಾಗಿ ಖರೀದಿಸಲಾಗಿದ್ದ ಕಾರೊಂದು ಖರೀದಿಸಿದ ದಿನವೇ ಅಪಘಾತಕ್ಕೀಡಾದ ಘಟನೆ ಸುಳ್ಯದ ಗಾಂಧಿನಗರದಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ.
ಜುಲೈ 3ರ ಸಂಜೆ ಮಂಗಳೂರಿನಿಂದ ನೂತನ ಕಾರನ್ನು ಖರೀದಿಸಿಕೊಂಡ ದಂಪತಿ ಮಡಿಕೇರಿ ಕಡೆಗೆ ಪ್ರಯಾಣಿಸುತ್ತಿದ್ದರು. ಸುಳ್ಯದ ಗಾಂಧಿನಗರ ಸಮೀಪ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಲಾರಿಗೆ ಢಿಕ್ಕಿ ಹೊಡೆದಿದೆ.
ಅಪಘಾತದ ಪರಿಣಾಮ ಕಾರಿನ ಮುಂಭಾಗ ತೀವ್ರವಾಗಿ ಹಾನಿಗೊಳಗಾಗಿದೆ. ಕಾರಿನಲ್ಲಿದ್ದ ಮಹಿಳೆಗೆ ಗಾಯಗಳಾಗಿದ್ದು, ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣ ನೆರವಿಗೆ ಧಾವಿಸಿ ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗಾಯಗೊಂಡ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಘಟನೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.





