ಬೆಂಗಳೂರು: ಶಾಲಾ ಬಸ್‌ನಲ್ಲಿ ಪ್ರಯಾಣಿಸುವ ಮಕ್ಕಳ ಸುರಕ್ಷತೆಯ ಸಂಪೂರ್ಣ ಜವಾಬ್ದಾರಿ ಶಾಲೆಯದ್ದೇ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಶಾಲಾ ಬಸ್ ಕೂಡ ಶಾಲೆಯ ಒಂದು ಭಾಗವೇ ಆಗಿರುವುದರಿಂದ, ಮಕ್ಕಳು ಸುರಕ್ಷಿತವಾಗಿ ಮನೆ ತಲುಪುವವರೆಗೆ ಶಾಲೆಯ ಕರ್ತವ್ಯ ಮುಂದುವರಿಯುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನಾಲ್ಕನೇ ತರಗತಿಯ ವಿದ್ಯಾರ್ಥಿಯೊಬ್ಬನ ಕಣ್ಣಿಗೆ ಶಾಲಾ ಬಸ್‌ನಲ್ಲಿ ಇತರ ವಿದ್ಯಾರ್ಥಿಗಳು ಬಣ್ಣದ ಕಾನ್ಫೆಟಿ (Confetti) ಸಿಂಪಡಿಸಿದ ಪರಿಣಾಮ, ಆತನಿಗೆ ಒಂದು ಕಣ್ಣಿನ ದೃಷ್ಟಿ ಶಾಶ್ವತವಾಗಿ ಹಾನಿಗೊಳಗಾದ ಘಟನೆ ಮಂಡ್ಯ ಜಿಲ್ಲೆಯ ಖಾಸಗಿ ಶಾಲೆಯೊಂದರ ಬಸ್ಸಿನಲ್ಲಿ ನಡೆದಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಶಾಲೆಯ ವಿರುದ್ಧ ದಾಖಲಿಸಲಾಗಿದ್ದ ಎಫ್‌ಐಆರ್ ರದ್ದುಪಡಿಸಬೇಕೆಂದು ಶಾಲಾ ಆಡಳಿತ ಮಂಡಳಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಆದರೆ, ನ್ಯಾಯಾಲಯ ಆ ಅರ್ಜಿಯನ್ನು ತಿರಸ್ಕರಿಸಿ ತನಿಖೆ ಮುಂದುವರಿಯಲು ಅವಕಾಶ ನೀಡಿದೆ.
ವಿಚಾರಣೆ ವೇಳೆ, “ಶಾಲಾ ಬಸ್ ಶಾಲೆಯ ವಿಸ್ತರಣೆಯೇ ಆಗಿದ್ದು, ಮಕ್ಕಳು ಮನೆಗೆ ಸುರಕ್ಷಿತವಾಗಿ ತಲುಪುವವರೆಗೆ ಶಾಲೆಯ ಜವಾಬ್ದಾರಿ ಕೊನೆಗೊಳ್ಳುವುದಿಲ್ಲ. ಶಾಲೆಗಳು ಮಕ್ಕಳ ಸುರಕ್ಷತೆಯ ಬಗ್ಗೆ ನಿರ್ಲಕ್ಷ್ಯ ತೋರಲು ಸಾಧ್ಯವಿಲ್ಲ” ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅಲ್ಲದೆ, ಶಾಲಾ ಬಸ್‌ನಲ್ಲಿ ಅಗತ್ಯ ಮೇಲ್ವಿಚಾರಣೆ, ಸಿಬ್ಬಂದಿ ನಿಯೋಜನೆ, ಸುರಕ್ಷತಾ ಕ್ರಮಗಳು ಹಾಗೂ ಸಿಸಿಟಿವಿ ಸೇರಿದಂತೆ ನಿಯಮಗಳನ್ನು ಪಾಲಿಸುವುದು ಶಾಲೆಗಳ ಕಾನೂನುಬದ್ಧ ಕರ್ತವ್ಯ ಎಂದು ನ್ಯಾಯಾಲಯ ತಿಳಿಸಿದೆ.
ಈ ತೀರ್ಪು ರಾಜ್ಯದ ಎಲ್ಲ ಶಾಲೆಗಳು ಹಾಗೂ ಶಾಲಾ ವಾಹನಗಳ ಸುರಕ್ಷತಾ ವ್ಯವಸ್ಥೆ ಕುರಿತು ಮಹತ್ವದ ಸಂದೇಶ ನೀಡಿದ್ದು, ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬುದನ್ನು ಮತ್ತೊಮ್ಮೆ ಒತ್ತಿಹೇಳಿದೆ.





