ಬೆಂಗಳೂರು: ನಗರದ ಬ್ರೂಕ್‌ಫೀಲ್ಡ್‌ನಲ್ಲಿರುವ ಬೇಬಿ ಕೇರ್ ಕೇಂದ್ರದಲ್ಲಿ ಮಕ್ಕಳ ಮೇಲೆ ದೈಹಿಕ ಹಿಂಸೆ ನಡೆಸಿದ ಪ್ರಕರಣದಲ್ಲಿ ಇಬ್ಬರು ಮಹಿಳೆಯರನ್ನು ಹೆಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮಂಜುಳಾ ಮತ್ತು ವಿಜಯಲಕ್ಷ್ಮೀ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಪೊಲೀಸರು, ಬಳಿಕ ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಪ್ರಕರಣದಲ್ಲಿ ಹೆಸರು ಕೇಳಿಬಂದಿದ್ದ ಭವಾನಿ, ಸಿಂಧು ಹಾಗೂ ಬಿಂದು ಅವರ ಪಾತ್ರದ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಸ್ಪಷ್ಟ ಸಾಕ್ಷ್ಯ ಸಿಕ್ಕಿಲ್ಲ ಎಂದು ತಿಳಿದುಬಂದಿದೆ. ಆದಾಗ್ಯೂ, ಹೆಚ್ಚಿನ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಈ ಮೂವರಿಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಬ್ರೂಕ್‌ಫೀಲ್ಡ್‌ನ ಬೇಬಿ ಕೇರ್ ಕೇಂದ್ರದಲ್ಲಿ ಮಕ್ಕಳ ಮೇಲೆ ಆಯಾಗಳು ಅಮಾನವೀಯವಾಗಿ ವರ್ತಿಸಿ ದೈಹಿಕ ಹಿಂಸೆ ನೀಡಿರುವ ವಿಡಿಯೊಗಳು ಬೆಳಕಿಗೆ ಬಂದಿದ್ದವು. ಈ ದೃಶ್ಯಗಳನ್ನು ಪರಿಶೀಲಿಸಿದ ಮಕ್ಕಳ ಸಹಾಯವಾಣಿ ಅಧಿಕಾರಿಗಳು ಹೆಚ್‌ಎಎಲ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಮಂಜುಳಾ, ವಿಜಯಲಕ್ಷ್ಮೀ, ಭವಾನಿ, ಸಿಂಧು ಮತ್ತು ಬಿಂದು ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.





