05 July 2026 |

ಕಂಬಳ ಕರಾವಳಿಯ ಸಂಪ್ರದಾಯ; ಮೈಸೂರು ದಸರಾಕ್ಕೆ ಸೇರಿಸಬೇಡಿ: ಯದುವೀರ್ ಒಡೆಯರ್

  • 04 Jul 2026 05:28:43 PM

ಮೈಸೂರು: ಈ ವರ್ಷದ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 18 ಮತ್ತು 19ರಂದು ಕಂಬಳ ಸ್ಪರ್ಧೆ ಆಯೋಜಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ, ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಂಬಳಕ್ಕೆ ಮೈಸೂರಿನ ಸಾತಗಳ್ಳಿ ಪ್ರದೇಶದಲ್ಲಿ ಸ್ಥಳ ಗುರುತಿಸಲಾಗಿದೆ ಎಂದು ತಿಳಿದುಬಂದಿದೆ. 

 

ಈ ಕುರಿತು ಪ್ರತಿಕ್ರಿಯಿಸಿರುವ ಯದುವೀರ್ ಒಡೆಯರ್, ಕಂಬಳವು ಕರಾವಳಿ ಕರ್ನಾಟಕದ ಇತಿಹಾಸ, ಸಂಸ್ಕೃತಿ ಮತ್ತು ಜನಜೀವನದೊಂದಿಗೆ ಬೆಸೆದುಕೊಂಡಿರುವ ವಿಶಿಷ್ಟ ಪರಂಪರೆಯಾಗಿದೆ. ಅದನ್ನು ಅದರ ಮೂಲ ನೆಲೆಯಿಂದ ಹೊರತಂದು ಕೇವಲ ಪ್ರವಾಸೋದ್ಯಮ ಅಥವಾ ಮನರಂಜನೆಯ ಕಾರ್ಯಕ್ರಮವಾಗಿ ಆಯೋಜಿಸುವ ಬಗ್ಗೆ ಎಚ್ಚರಿಕೆಯಿಂದ ಯೋಚಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. 

 

ಮೈಸೂರು ದಸರಾಕೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯವಿದೆ. ಆದ್ದರಿಂದ ದಸರಾದ ಮೂಲ ಪರಂಪರೆ ಹಾಗೂ ವೈಭವಕ್ಕೆ ಧಕ್ಕೆಯಾಗದಂತೆ ಸರ್ಕಾರ ಈ ಪ್ರಸ್ತಾವನೆಯನ್ನು ಮರುಪರಿಶೀಲಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

 

ಇದರ ಜೊತೆಗೆ, ಮೈಸೂರು ದಸರಾ ಆಯೋಜನೆಗೆ ಸಂಬಂಧಿಸಿದ ಮೂಲಸೌಕರ್ಯ ಹಾಗೂ ಆಡಳಿತಾತ್ಮಕ ಸವಾಲುಗಳತ್ತ ಮೊದಲಿಗೆ ಗಮನ ಹರಿಸುವುದು ಅಗತ್ಯವೆಂದೂ ಅವರು ಹೇಳಿದ್ದಾರೆ. ಹೊಸ ಕಾರ್ಯಕ್ರಮಗಳನ್ನು ಸೇರಿಸುವ ಮೊದಲು ಈಗಿರುವ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕೆಂದು ಅವರು ಸಲಹೆ ನೀಡಿದ್ದಾರೆ.

 

ಮೈಸೂರು ದಸರಾದಲ್ಲಿ ಕಂಬಳ ಆಯೋಜಿಸುವ ಸರ್ಕಾರದ ನಿರ್ಧಾರ ಪರ ಹಾಗೂ ವಿರೋಧದ ಚರ್ಚೆಗೆ ಕಾರಣವಾಗಿದ್ದು, ಈ ವಿಚಾರ ಮುಂದಿನ ದಿನಗಳಲ್ಲಿ ಇನ್ನಷ್ಟು ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದೆ.