08 July 2026 |

ಬೆಳ್ತಂಗಡಿಯಲ್ಲಿ ಭೀಕರ ರಸ್ತೆ ಅಪಘಾತ: ಬೈಕ್‌ಗೆ ಗೂಡ್ಸ್ ರಿಕ್ಷಾ ಡಿಕ್ಕಿ, ಓರ್ವ ಸಾವು – ಮತ್ತೋರ್ವ ಗಂಭೀರ

  • 07 Jul 2026 10:45:05 AM

ಬೆಳ್ತಂಗಡಿ: ದ್ವಿಚಕ್ರ ವಾಹನ ಮತ್ತು ಗೂಡ್ಸ್ ರಿಕ್ಷಾ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವರು ಮೃತಪಟ್ಟಿದ್ದು, ಮತ್ತೋರ್ವರು ಗಂಭೀರವಾಗಿ ಗಾಯಗೊಂಡ ಘಟನೆ ಜುಲೈ 5ರ ರಾತ್ರಿ ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯ ನಿಟ್ಟಡೆ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

 

ಅಪಘಾತದಲ್ಲಿ ಕರಿಮಣೇಲು ಗ್ರಾಮದ ಗಾಂಧಿನಗರ ತಿಮರಡ್ಡ ಮನೆ ನಿವಾಸಿ ರವೀಂದ್ರ ಮೂಲ್ಯ (47) ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಸಹೋದರ ಜಗದೀಶ್ ಮೂಲ್ಯ ತೀವ್ರವಾಗಿ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

ಗಾರೆ ಕೆಲಸ ನಿರ್ವಹಿಸುತ್ತಿದ್ದ ಇಬ್ಬರು ಸಹೋದರರು ಕೆಲಸ ಮುಗಿಸಿ ದ್ವಿಚಕ್ರ ವಾಹನದಲ್ಲಿ ಗುರುವಾಯನಕೆರೆಯಿಂದ ವೇಣೂರು ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ವೇಣೂರಿನಿಂದ ಬರುತ್ತಿದ್ದ ಗೂಡ್ಸ್ ರಿಕ್ಷಾ ನಿಟ್ಟಡೆಯ ಕುಂಭಶ್ರೀ ಶಾಲೆಯ ಸಮೀಪ ಎದುರಿಗೆ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಬೈಕ್ ಪಲ್ಟಿಯಾಗಿದ್ದು, ರವೀಂದ್ರ ಮೂಲ್ಯ ಅವರ ತಲೆಗೆ ತೀವ್ರ ಗಾಯಗಳಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜಗದೀಶ್ ಮೂಲ್ಯ ಅವರ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಪ್ರಾಥಮಿಕ ಮಾಹಿತಿಯ ಪ್ರಕಾರ, ಹೆದ್ದಾರಿಯಲ್ಲಿದ್ದ ಸಣ್ಣ ಗುಂಡಿಯನ್ನು ತಪ್ಪಿಸಲು ಗೂಡ್ಸ್ ರಿಕ್ಷಾ ಚಾಲಕ ವಾಹನವನ್ನು ವಿರುದ್ಧ ದಿಕ್ಕಿಗೆ ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಘಟನೆಯ ಸಮಯದಲ್ಲಿ ಮಳೆಯೂ ಸುರಿಯುತ್ತಿದ್ದ ಕಾರಣ ಪರಿಸ್ಥಿತಿ ಮತ್ತಷ್ಟು ಸಂಕೀರ್ಣಗೊಂಡಿದ್ದು, ದ್ವಿಚಕ್ರ ವಾಹನ ಸವಾರರಿಗೆ ಅಪಾಯ ಗೋಚರಿಸದೇ ಇರಬಹುದು ಎಂದು ಹೇಳಲಾಗುತ್ತಿದೆ.

 

ಮೃತ ರವೀಂದ್ರ ಮೂಲ್ಯ ಅವರು ತಾಯಿ ಬಾಗಿ, ಪತ್ನಿ ಭವಾನಿ, ಪುತ್ರ ಸ್ವಸ್ತಿಕ್ ಸೇರಿದಂತೆ ಸಹೋದರರು, ಸಹೋದರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅವರ ಅಕಾಲಿಕ ನಿಧನದಿಂದ ಕುಟುಂಬದವರಲ್ಲಿ ದುಃಖದ ವಾತಾವರಣ ಮನೆಮಾಡಿದೆ.