08 July 2026 |

ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ: ಜುಲೈ 8ರಂದು ಶಾಲೆ, ಪಿಯು ಕಾಲೇಜುಗಳಿಗೆ ರಜೆ

  • 07 Jul 2026 09:08:21 PM

ಮಂಗಳೂರು: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲಾಡಳಿತವು ಜುಲೈ 8 (ಬುಧವಾರ) ರಂದು ಎಲ್ಲಾ ಶಾಲೆಗಳು ಹಾಗೂ ದ್ವಿತೀಯ ಪಿಯುಸಿ (2nd PUC) ವರೆಗೆ ಇರುವ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದೆ.

 

ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶದ ಪ್ರಕಾರ, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ದ್ವಿತೀಯ ಪಿಯುಸಿ ವರೆಗೆ ಇರುವ ಪದವಿಪೂರ್ವ ಕಾಲೇಜುಗಳು, ವಸತಿ ಶಾಲೆಗಳು ಹಾಗೂ ವಸತಿ ಪಿಯು ಕಾಲೇಜುಗಳು ನಾಳೆ ಕಾರ್ಯನಿರ್ವಹಿಸುವುದಿಲ್ಲ.

 

ಜಿಲ್ಲಾಡಳಿತದ ಆದೇಶವನ್ನು ಎಲ್ಲಾ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಪಾಲಿಸಬೇಕಿದ್ದು, ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

 

ಮಳೆಯ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ಹಾಗೂ ಪೋಷಕರು ಅನಗತ್ಯವಾಗಿ ಹೊರಗೆ ತೆರಳುವುದನ್ನು ತಪ್ಪಿಸಿ, ಜಿಲ್ಲಾಡಳಿತದ ಅಧಿಕೃತ ಪ್ರಕಟಣೆಗಳನ್ನು ಅನುಸರಿಸುವಂತೆ ಮನವಿ ಮಾಡಲಾಗಿದೆ. ಸಾರ್ವಜನಿಕರು ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸಿ ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.