ಪುತ್ತೂರು: ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ, ಪುತ್ತೂರು ಭೂ ಮಂಡಳಿಯ ಸದಸ್ಯ ಹಾಗೂ ಕಂಬಳ ಕ್ಷೇತ್ರದ ಚಿರಪರಿಚಿತ ನಿರೂಪಕರಾಗಿದ್ದ ನಿರಂಜನ ರೈ ಮಡಂತಬೆಟ್ಟು ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇಂದು (ಜುಲೈ 8) ಪುತ್ತೂರು ಸಹಾಯಕ ಆಯುಕ್ತರ ಕಚೇರಿಗೆ ಆಗಮಿಸುತ್ತಿದ್ದ ವೇಳೆ ಅವರಿಗೆ ಏಕಾಏಕಿ ಅಸ್ವಸ್ಥತೆ ಕಾಣಿಸಿಕೊಂಡು ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ನಿರಂಜನ ರೈ ಅವರು ಕಂಬಳ ಕ್ಷೇತ್ರದಲ್ಲಿ ಚಿರಪರಿಚಿತರಾಗಿದ್ದು, ಪುತ್ತೂರು, ಉಪ್ಪಿನಂಗಡಿ, ತಿರುವೈಗುತ್ತು ಸೇರಿದಂತೆ ವಿವಿಧ ಕಂಬಳಗಳಲ್ಲಿ ನಿರೂಪಕರಾಗಿ ಹಾಗೂ ಸಂಘಟಕರಾಗಿ ಸೇವೆ ಸಲ್ಲಿಸಿ ಜನಪ್ರಿಯತೆ ಗಳಿಸಿದ್ದರು. ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.





