ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಕ್ಯಾನಿಂಗ್ ಕೇಂದ್ರಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಸ್ಕ್ಯಾನಿಂಗ್‌ಗೆ ಬರುವ ಗರ್ಭಿಣಿಯರ ವಯಸ್ಸಿನ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗರ್ಭಿಣಿಯರು ಪತ್ತೆಯಾದಲ್ಲಿ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಡಾ. ಅಮೃತಾ ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಸಲಹಾ ಸಮಿತಿಯ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಿತು. ಸಭೆಯಲ್ಲಿ 2026ರ ಏಪ್ರಿಲ್‌ನಿಂದ ಜೂನ್ ಅವಧಿಯ ಜನನ ಅಂಕಿಅಂಶಗಳನ್ನು ಮಂಡಿಸಲಾಗಿದ್ದು, ಈ ಅವಧಿಯಲ್ಲಿ ಜಿಲ್ಲೆಯಲ್ಲಿ 2,911 ಗಂಡು ಮಕ್ಕಳು ಹಾಗೂ 2,872 ಹೆಣ್ಣು ಮಕ್ಕಳು ಜನಿಸಿದ್ದಾರೆ. ಜಿಲ್ಲೆಯ ಲಿಂಗಾನುಪಾತ 987 ಎಂದು ತಿಳಿಸಲಾಯಿತು.
ಹೊಸದಾಗಿ ಸ್ಕ್ಯಾನಿಂಗ್ ಯಂತ್ರಗಳನ್ನು ಖರೀದಿಸಿರುವ ವಿವಿಧ ಸಂಸ್ಥೆಗಳ ಅರ್ಜಿಗಳನ್ನು ಸಭೆಯಲ್ಲಿ ಪರಿಶೀಲಿಸಲಾಯಿತು. ಜೊತೆಗೆ, ಸಲಹಾ ಸಮಿತಿ ಆಸ್ಪತ್ರೆಗಳಿಗೆ ಭೇಟಿ ನೀಡಿದ ವೇಳೆ ಕಂಡುಬಂದ ಕೊರತೆಗಳು ಹಾಗೂ ಅವುಗಳ ನಿವಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಲಾಯಿತು.
ಜಿಲ್ಲೆಯಲ್ಲಿರುವ ಪಶು ಆಸ್ಪತ್ರೆಗಳು ಹಾಗೂ ಪಶು ಚಿಕಿತ್ಸಾ ಕ್ಲಿನಿಕ್‌ಗಳು ತಮ್ಮ ಸಂಸ್ಥೆಗಳಲ್ಲಿ “ಪ್ರಾಣಿಗಳಿಗೆ ಮಾತ್ರ ಸ್ಕ್ಯಾನ್” ಎಂಬ ಫಲಕವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಅಲ್ಲದೆ, ಪ್ರಾಣಿಗಳ ಹೊರತಾಗಿ ಮನುಷ್ಯರಿಗೆ ಸ್ಕ್ಯಾನಿಂಗ್ ಸೇವೆ ನೀಡುವುದಿಲ್ಲ ಎಂಬುದನ್ನು ದೃಢೀಕರಿಸುವ ನೋಟರಿ ಅಫಿಡವಿಟ್‌ನ್ನು ಸಂಬಂಧಿತ ಸಂಸ್ಥೆಗಳು ಸಲ್ಲಿಸಬೇಕೆಂದು ಸೂಚಿಸಲಾಗಿದೆ.





