10 July 2026 |

RBIಯಿಂದ ಬ್ಯಾಂಕ್ ಗ್ರಾಹಕರಿಗೆ ಸಿಹಿಸುದ್ದಿ: ಈ SMSಗಳಿಗೆ ಇನ್ನು ಶುಲ್ಕ ವಿಧಿಸಲು ಅವಕಾಶವಿಲ್ಲ

  • 09 Jul 2026 01:07:52 PM

ನವದೆಹಲಿ: ಪ್ರತಿಯೊಂದು ಬ್ಯಾಂಕ್ ಗಳು ನಾನಾ ರೀತಿಯ ಮೆಸೇಜ್ ಕಳುಹಿಸುತ್ತಲೇ ಇರುತ್ತವೆ. ನಿಯಮಾನುಸರಣೆ (Compliance), ಜಾಗೃತಿ (Awareness) ಹಾಗೂ ಪ್ರಚಾರ (Promotional) ಉದ್ದೇಶಕ್ಕಾಗಿ ಬ್ಯಾಂಕ್‌ಗಳು ಕಳುಹಿಸುವ SMS ಸಂದೇಶಗಳನ್ನು ಗ್ರಾಹಕರಿಗೆ ಕಳುಹಿಸುತ್ತವೆ. ಇದೀಗ ಗ್ರಾಹಕರ ಹಿತದೃಷ್ಟಿಯಿಂದ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ಈ ರೀತಿ ಕಳುಹಿಸುವ ಸಂದೇಶ ವೆಚ್ಚವನ್ನು ಗ್ರಾಹಕರಿಂದ ವಸೂಲು ಮಾಡಲು ಅವಕಾಶ ಇರುವುದಿಲ್ಲ. ಈ ವೆಚ್ಚವನ್ನು ಬ್ಯಾಂಕ್‌ಗಳೇ ಭರಿಸಬೇಕಾಗುತ್ತದೆ. 

 

ಈವರೆಗೆ ಅನೇಕ ಬ್ಯಾಂಕ್‌ಗಳು SMS ಸೇವೆಗಳ ಹೆಸರಿನಲ್ಲಿ ಪ್ರತಿ ತ್ರೈಮಾಸಿಕಕ್ಕೆ ಸುಮಾರು ₹15 ರಿಂದ ₹18 ವರೆಗೆ ಶುಲ್ಕ ವಸೂಲು ಮಾಡುತ್ತಿದ್ದವು. RBIಯ ಹೊಸ ನಿರ್ದೇಶನದಿಂದ ಬ್ಯಾಂಕ್‌ಗಳಿಗೆ ಒಟ್ಟಾರೆ ಸುಮಾರು ₹300 ಕೋಟಿವರೆಗೆ ಶುಲ್ಕ ಆದಾಯದ ನಷ್ಟವಾಗಬಹುದು ಎಂದು ಬ್ಯಾಂಕಿಂಗ್ ವಲಯದ ಅಂದಾಜು ತಿಳಿಸಿದೆ. 

 

₹500 ಅಥವಾ ಅದಕ್ಕಿಂತ ಕಡಿಮೆ ವ್ಯವಹಾರಗಳಿಗೆ ಹೊಸ ನಿಯಮ

RBI ಮತ್ತೊಂದು ಮಹತ್ವದ ಬದಲಾವಣೆಯನ್ನೂ ಮಾಡಿದೆ. ₹500 ಅಥವಾ ಅದಕ್ಕಿಂತ ಕಡಿಮೆ ಮೌಲ್ಯದ ವ್ಯವಹಾರಗಳಿಗೆ SMS ಎಚ್ಚರಿಕೆ ಸಂದೇಶ ಕಳುಹಿಸುವುದು ಇನ್ನು ಕಡ್ಡಾಯವಿರುವುದಿಲ್ಲ. ಬ್ಯಾಂಕ್‌ಗಳು ಗ್ರಾಹಕರಿಗೆ ಬೇರೆ ಡಿಜಿಟಲ್ ಮಾರ್ಗಗಳ ಮೂಲಕ ಮಾಹಿತಿ ನೀಡುವ ಅವಕಾಶವಿದೆ. ಇದರಿಂದ ಅನಗತ್ಯ SMSಗಳ ಸಂಖ್ಯೆ ಕಡಿಮೆಯಾಗುವುದರ ಜೊತೆಗೆ ಬ್ಯಾಂಕ್‌ಗಳ ವೆಚ್ಚವೂ ಇಳಿಕೆಯಾಗುವ ನಿರೀಕ್ಷೆಯಿದೆ. 

 

ಗ್ರಾಹಕರಿಗೆ ಇದರ ಪ್ರಯೋಜನವೇನು?

Compliance, Awareness ಹಾಗೂ Promotional SMSಗಳಿಗೆ ಪ್ರತ್ಯೇಕ ಶುಲ್ಕ ವಿಧಿಸಲು ಬ್ಯಾಂಕ್‌ಗಳಿಗೆ ಅವಕಾಶ ಇರುವುದಿಲ್ಲ.

ಅನಗತ್ಯ SMS ಸಂದೇಶಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ.

ಬ್ಯಾಂಕ್ ಸೇವೆಗಳ ಶುಲ್ಕ ವ್ಯವಸ್ಥೆಯಲ್ಲಿ ಹೆಚ್ಚು ಪಾರದರ್ಶಕತೆ ಬರಲಿದೆ.

ಕಡಿಮೆ ಮೌಲ್ಯದ ವ್ಯವಹಾರಗಳಿಗೆ SMS ಬದಲಿಗೆ ಇತರ ಡಿಜಿಟಲ್ ಎಚ್ಚರಿಕೆ ವ್ಯವಸ್ಥೆಗಳನ್ನು ಬಳಸುವ ಅವಕಾಶ ಬ್ಯಾಂಕ್‌ಗಳಿಗೆ ದೊರೆಯಲಿದೆ.

 

ಈ ನಿರ್ಧಾರದಿಂದ ಬ್ಯಾಂಕ್‌ಗಳ ಶುಲ್ಕ ಆದಾಯದಲ್ಲಿ ಇಳಿಕೆಯಾಗುವ ಸಾಧ್ಯತೆ ಇದ್ದರೂ, ಆ ನಷ್ಟವನ್ನು ಭರಿಸಲು ಬ್ಯಾಂಕ್‌ಗಳು ಭವಿಷ್ಯದಲ್ಲಿ ಬೇರೆ ರೀತಿಯ ಸೇವಾ ಶುಲ್ಕಗಳನ್ನು ಪರಿಷ್ಕರಿಸುತ್ತವೆಯೇ ಎಂಬ ಬಗ್ಗೆ RBI ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.