Udupi, April 10 : ಹಿಂದಿನ ಕಾಲದಲ್ಲಿ ಒಟ್ಟು ಮದುವೆಗೆ ಖರ್ಚಾಗುತ್ತಿದ್ದ ಹಣ ಇತ್ತೀಚಿನ ಕಾಲದಲ್ಲಿ ವೆಡ್ಡಿಂಗ್ ಫೋಟೋಗ್ರಾಫಿಗೆ (Wedding Photography) ಖರ್ಚಾಗುತ್ತಿದೆ. ತನ್ನ ಮಗಳ ಅಥವಾ ಮಗನ ಮದುವೆ ಅದ್ದೂರಿಯಾಗಿ ಮಾಡಬೇಕೆಂಬ ಕನಸು ಪ್ರತಿಯೊಬ್ಬ ತಂದೆ ತಾಯಿಯರಿಗೆ ಇರುತ್ತೆ. ಅದೇ ಕಾರಣಕ್ಕೆ ಪ್ರಿ ವೆಡ್ಡಿಂಗ್ (Pre Wedding) ಹಾಗೂ ಪೋಸ್ಟ್ ವೆಡ್ಡಿಂಗ್ (Post Wedding ) ಫೋಟೋಶೂಟ್ ಕ್ರೇಜ್ (Photoshoot) ಇತ್ತೀಚಿಗೆ ಬಹಳಷ್ಟು ಹೆಚ್ಚಿದೆ.
ಪ್ರವಾಸಿ ತಾಣಗಳಿಗೆ ಜೋಡಿಗಳನ್ನು ಕರೆದುಕೊಂಡು ಹೋಗಿ ಫೋಟೋ ಶೂಟ್ ಮಾಡೋದು ಸರ್ವೇ ಸಾಮಾನ್ಯವಾಗಿದೆ. ಆದರೆ ಇದೀಗ ಉಡುಪಿ ಕೃಷ್ಣ ಮಠದ ( Udupi Shri Krishna Matha ) ರಥ ಬೀದಿಯಲ್ಲಿ ಇಂಥ ಚಟುವಟಿಕೆಗಳಿಗೆ ನಿಷೇಧ ಹೇರಲಾಗಿದೆ. ಉಡುಪಿಯ ಆಡಳಿತ ಮಂಡಳಿ ಈ ನಿರ್ಧಾರ ತೆಗೆದುಕೊಳ್ಳಲು ಕೆಲವು ಕಾರಣಗಳಿವೆ.
ಯಾಕೆ ಉಡುಪಿ ಶ್ರೀಕೃಷ್ಣ ಮಠದ ಈ ನಿರ್ಧಾರ ತೆಗೆದುಕೊಂಡಿದೆ ?
ವೆಡ್ಡಿಂಗ್ ಹಾಗೂ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ವಿಚಾರದಲ್ಲಿ ಉಡುಪಿ ಶ್ರೀ ಕೃಷ್ಣ ಮಠ ಮಹತ್ವದ ನಿರ್ಧಾರಕ್ಕೆ ಬಂದಿದೆ. ಬೆಳ್ಳಂಬೆಳಗ್ಗೆ ಹಾಗೂ ಸ್ವಾಮೀಜಿಗಳ ಓಡಾಟದ ವೇಳೆ ಮುಜುಗರದ ಸನ್ನಿವೇಶದ ಸೃಷ್ಟಿಯಾಗುವುದನ್ನು ತಪ್ಪಿಸುವುದಕ್ಕಾಗಿ ಮಠವು ಈ ಕ್ರಮ ಕೈಗೊಂಡಿದೆ. ಪರ್ಯಾಯ ಪುತ್ತಿಗೆ ಮಠ ಹೊರಡಿಸಿದ ಪ್ರಕಟಣೆಯ ಪ್ರಕಾರ ಕೃಷ್ಣ ಮಠದ ರಥ ಬೀದಿಯ ಆವರಣದಲ್ಲಿ ಪ್ರಿ ವೆಡ್ಡಿಂಗ್ ಹಾಗು ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ನಿಷೇಧಿ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಕೃಷ್ಣ ಮಠದ ರಥಬೀದಿ ಪಾರಂಪರಿಕ ಕಟ್ಟಡಗಳು ಇರುವ ಜಾಗ. ಕೇರಳ ಬೆಂಗಳೂರು ಕಡೆಯಿಂದ ಬರುವ ಫೋಟೋಗ್ರಾಫರ್ಸ್ ಹಾವಳಿ ಹೆಚ್ಚಾಗಿದೆ. ಪ್ರಿ ವೆಡ್ಡಿಂಗ್ ಹಾಗೂ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ಹೆಸರಿನಲ್ಲಿ ಬೆಳ್ಳಂಬೆಳ್ಳಗ್ಗೆ ಮಠದ ಆವರಣದಲ್ಲಿ ಅಸಭ್ಯ ವರ್ತನೆ ಕಾಣಿಸುತ್ತಿದೆ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಠದ ಅಧಿಕಾರಿಗಳು ತಿಳಿಸಿದ್ದಾರೆ. ಫೋಟೋಶೂಟ್ ನೆಪದಲ್ಲಿ ರಥಬೀದಿಯಲ್ಲಿ ಪ್ರೇಮ ಸಲ್ಲಾಪ ಕೂಡ ನಡೆಯುತ್ತದೆ ಎಂದು ತಿಳಿಸಿದ್ದಾರೆ.
ಇದು ಧಾರ್ಮಿಕತೆ ಆಚರಣೆ ನಡೆಯುವ ಸ್ಥಳ. ವಿವಿಧ ಊರುಗಳಿಂದ ಬರುವ ಫೋಟೋಗ್ರಾಫರ್‌ಗಳು, ಜೋಡಿಗಳು ವೆಡ್ಡಿಂಗ್ ಫೋಟೋಶೂಟ್ ಹೆಸರಿನಲ್ಲಿ ಸಲ್ಲಾಪ ಮಾಡುತ್ತಾರೆ. ಇದು ಒಂದು ತರ ವಿರೋಧಭಾಸವಾಗಿ ಕಾಣಿಸುತ್ತಿದೆ. ಒಂದೆಡೆ ಧಾರ್ಮಿಕ ಪ್ರಜ್ಞೆ ವೃದ್ಧಿಸುತ್ತಿದ್ದರೆ, ಮತ್ತೊಂದೆಡೆ ಅದಕ್ಕೆ ತದ್ವಿರುದ್ಧವಾದ ವಾತಾವರಣಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಉಡುಪಿ ಶ್ರೀ ಕೃಷ್ಣ ಮಠ ತಪ್ಪಿತಸ್ಥರಿಗೆ ಕಠಿಣ ಕ್ರಮ ಕೈಗೊಳ್ಳಾಗುವುದು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.