10 July 2026 |

ಹೆಲ್ಮೆಟ್‌, ಸೀಟ್‌ಬೆಲ್ಟ್‌ ಪತ್ತೆ ಹಚ್ಚುವ ಕ್ಯಾಮೆರಾಗಳಿವೆ… ಗುಂಡಿಗಳೇಕೆ ಕಾಣುತ್ತಿಲ್ಲ?; ಸರ್ಕಾರವನ್ನು ಪ್ರಶ್ನಿಸಿದ ರಾಹುಲ್ ಗಾಂಧಿ

  • 10 Jul 2026 04:11:38 PM

ನವದೆಹಲಿ: ಸಂಚಾರ ನಿಯಮ ಉಲ್ಲಂಘನೆಗಳನ್ನು ಕ್ಷಣಾರ್ಧದಲ್ಲಿ ಪತ್ತೆಹಚ್ಚಿ ದಂಡ ವಿಧಿಸುವ ಅತ್ಯಾಧುನಿಕ ಕ್ಯಾಮೆರಾ ತಂತ್ರಜ್ಞಾನ ಇದ್ದರೂ, ಜೀವಕ್ಕೆ ಅಪಾಯ ಉಂಟುಮಾಡುವ ರಸ್ತೆ ಗುಂಡಿಗಳನ್ನು ಪತ್ತೆಹಚ್ಚಿ ಸರಿಪಡಿಸಲು ಇದೇ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಲಾಗುತ್ತಿಲ್ಲ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

 

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಹೆಲ್ಮೆಟ್ ಧರಿಸದಿರುವುದು ಅಥವಾ ಸೀಟ್‌ಬೆಲ್ಟ್ ಹಾಕದಿರುವುದನ್ನು ಕ್ಯಾಮೆರಾಗಳು ಕೆಲವೇ ಕ್ಷಣಗಳಲ್ಲಿ ಗುರುತಿಸಿ ದಂಡ ವಿಧಿಸುತ್ತವೆ. ಆದರೆ ಪ್ರತಿದಿನ ಅಪಘಾತಗಳಿಗೆ ಕಾರಣವಾಗುವ ರಸ್ತೆ ಗುಂಡಿಗಳನ್ನು ಗುರುತಿಸಿ ಅವುಗಳನ್ನು ತ್ವರಿತವಾಗಿ ದುರಸ್ತಿಪಡಿಸಲು ಇದೇ ಮಟ್ಟದ ತಂತ್ರಜ್ಞಾನವನ್ನು ಬಳಸುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

 

ರಸ್ತೆ ಸುರಕ್ಷತೆ ಎಂದರೆ ಕೇವಲ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವುದಷ್ಟೇ ಅಲ್ಲ, ಜನರು ಸುರಕ್ಷಿತವಾಗಿ ಸಂಚರಿಸಲು ಯೋಗ್ಯವಾದ ರಸ್ತೆಗಳನ್ನು ಒದಗಿಸುವ ಜವಾಬ್ದಾರಿಯೂ ಸರ್ಕಾರದ ಮೇಲಿದೆ ಎಂದು ಅವರು ಹೇಳಿದ್ದಾರೆ.

 

ಸರ್ಕಾರವು ನಾಗರಿಕರ ಮೇಲೆ ದಂಡ ವಿಧಿಸಲು ತಂತ್ರಜ್ಞಾನವನ್ನು ಬಳಸುವಂತೆಯೇ, ಸಾರ್ವಜನಿಕರ ಜೀವ ರಕ್ಷಿಸುವ ರಸ್ತೆ ಮೂಲಸೌಕರ್ಯವನ್ನು ಸುಧಾರಿಸಲು ಕೂಡ ಅದೇ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.