11 July 2026 |

ಬಸ್‌ನಲ್ಲಿ ವಿದ್ಯಾರ್ಥಿನಿಯರಿಗೆ ಅಸಭ್ಯ ವರ್ತನೆ ಆರೋಪ: ಉಪ್ಪಿನಂಗಡಿ ಮೂಲದ ಕಂಡಕ್ಟರ್ ಪೊಲೀಸ್ ವಶಕ್ಕೆ

  • 11 Jul 2026 12:58:19 PM

ಮಂಗಳೂರು: ಕಾಲೇಜು ವಿದ್ಯಾರ್ಥಿನಿಯರಿಗೆ ಬಸ್‌ನಲ್ಲಿ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಖಾಸಗಿ ಬಸ್‌ನ ಕಂಡಕ್ಟರ್‌ನನ್ನು ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

 

ಬಂಧಿತನನ್ನು 32 ವರ್ಷದ ಇರ್ಫಾನ್ ಎಂದು ಗುರುತಿಸಲಾಗಿದೆ. ಆತ ಉಪ್ಪಿನಂಗಡಿ ಸಮೀಪದ ಕಲ್ಲೇರಿ ಗ್ರಾಮದ ನಿವಾಸಿಯಾಗಿದ್ದು, ಪ್ರಸ್ತುತ ಉಪ್ಪಿನಂಗಡಿಯ ಕರ್ವೇಲು ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾನೆ. ಮಂಗಳೂರು-ವಿಟ್ಲ ಮಾರ್ಗದಲ್ಲಿ ಸಂಚರಿಸುವ ಖಾಸಗಿ ಬಸ್‌ನಲ್ಲಿ ಕಂಡಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದನು.

 

ಪೊಲೀಸರು ನೀಡಿರುವ ಮಾಹಿತಿಯಂತೆ, ಜುಲೈ 9ರಂದು ಸಂಜೆ ಸುಮಾರು 5 ಗಂಟೆ ವೇಳೆಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರ ಎದುರು ಆರೋಪಿ ತನ್ನ ಗುಪ್ತಾಂಗ ಪ್ರದರ್ಶಿಸಿ ಅಸಭ್ಯ ಸನ್ನೆಗಳು ಮಾಡಿದ್ದಾನೆ ಎನ್ನಲಾಗಿದೆ. ಅಲ್ಲದೆ, ವಿದ್ಯಾರ್ಥಿನಿಯರನ್ನು ಬಸ್‌ನ ಹಿಂದಿನ ಸೀಟಿನತ್ತ ಬರುವಂತೆ ಕರೆದು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

 

ಘಟನೆ ಕುರಿತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜುಲೈ 10ರಂದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.