11 July 2026 |

ವಿಯೆಟ್ನಾಂನಲ್ಲಿ ದೋಣಿ ದುರಂತ: 15 ಭಾರತೀಯ ಪ್ರವಾಸಿಗರ ದುರ್ಮರಣ, ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ

  • 11 Jul 2026 04:05:45 PM

ಹನೋಯ್ (ವಿಯೆಟ್ನಾಂ): ವಿಯೆಟ್ನಾಂನ ಜನಪ್ರಿಯ ಪ್ರವಾಸಿ ತಾಣವಾದ ಫು ಕ್ವೊಕ್ (Phu Quoc) ದ್ವೀಪದ ಸಮೀಪ ಶನಿವಾರ ಸಂಭವಿಸಿದ ಭೀಕರ ದೋಣಿ ದುರಂತದಲ್ಲಿ 15 ಭಾರತೀಯ ಪ್ರವಾಸಿಗರು ಮೃತಪಟ್ಟಿದ್ದಾರೆಎಂದು ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.  

 

ಮಾಹಿತಿಯ ಪ್ರಕಾರ, ದೋಣಿಯಲ್ಲಿ 32 ಭಾರತೀಯ ಪ್ರವಾಸಿಗರು ಹಾಗೂ 4 ಸಿಬ್ಬಂದಿ ಸೇರಿದಂತೆ ಒಟ್ಟು 36 ಮಂದಿ ಪ್ರಯಾಣಿಸುತ್ತಿದ್ದರು. ಮಧ್ಯಾಹ್ನದ ವೇಳೆಯಲ್ಲಿ ದೋಣಿ ಏಕಾಏಕಿ ಮಗುಚಿಬಿದ್ದಿದ್ದು, ಎಲ್ಲ ಪ್ರಯಾಣಿಕರು ಸಮುದ್ರಕ್ಕೆ ಬಿದ್ದಿದ್ದಾರೆ. ಘಟನೆಯ ಕಾರಣವನ್ನು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.  

 

ಘಟನೆಯ ಬಳಿಕ ಸಮೀಪದಲ್ಲಿದ್ದ ಇತರೆ ಪ್ರವಾಸಿ ದೋಣಿಗಳು ಹಾಗೂ ರಕ್ಷಣಾ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಶೋಧ ಮತ್ತು ರಕ್ಷಣಾ ಕಾರ್ಯ ಆರಂಭಿಸಿವೆ. ಹಲವರನ್ನು ರಕ್ಷಿಸಲಾಗಿದ್ದು, ಉಳಿದವರಿಗಾಗಿ ಕಾರ್ಯಾಚರಣೆ ಮುಂದುವರಿದಿದೆ.  

 

ಭಾರತದ ವಿಯೆಟ್ನಾಂ ರಾಯಭಾರ ಕಚೇರಿ ಘಟನೆ ಕುರಿತು ಸಂತಾಪ ಸೂಚಿಸಿದ್ದು, ಹನೋಯ್ ಹಾಗೂ ಹೋ ಚಿ ಮಿನ್ ನಗರದಲ್ಲಿರುವ ಭಾರತೀಯ ಕಾನ್ಸುಲೇಟ್‌ನಲ್ಲಿ ಸಹಾಯವಾಣಿ (ಕಂಟ್ರೋಲ್ ರೂಂ)ಗಳನ್ನು ಆರಂಭಿಸಿದೆ. ಸಂತ್ರಸ್ತರ ಕುಟುಂಬಗಳಿಗೆ ಅಗತ್ಯ ಸಹಾಯ ಒದಗಿಸಲಾಗುತ್ತಿದೆ ಎಂದು ತಿಳಿಸಿದೆ.