New Delhi, April 10 : 26/11 ಮುಂಬೈ ಭಯೋತ್ಪಾದಕ ದಾಳಿ ಇಡೀ ವಿಶ್ವವನ್ನೇ ನಿಬ್ಬೆರಗಾಗಿಸಿತ್ತು. ಭಯೋತ್ಪಾದಕ ತಹವ್ವೂರ್ ರಾಣಾ ಈ ದಾಳಿಯ ಸೂತ್ರದಾರ. 26/11 ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದ ವಿಚಾರಣೆಯನ್ನು ಭಾರತದಲ್ಲಿ ಎದುರಿಸಲು ಅವನನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರದ ಬಹು-ಸಂಸ್ಥೆಗಳ ತಂಡವು ಈಗಾಗಲೇ ಅಮೆರಿಕದಲ್ಲಿದೆ.
ಹೇಗಿತ್ತು 26/11 ಮುಂಬೈ ಭಯೋತ್ಪಾದಕ ದಾಳಿಯ ಭೀಕರತೆ
ವ್ಯಾಪಕ ಜಾಗತಿಕ ಖಂಡನೆಗೆ ಗುರಿಯಾದ ಈ ದಾಳಿ ಬುಧವಾರ, ನವೆಂಬರ್ 26 ರಂದು ಪ್ರಾರಂಭವಾಗಿ, ನವೆಂಬರ್ 29, 2008 ರ ಶನಿವಾರದವರೆಗೆ ಮುಂದುವರೆದಿತ್ತು. ದಾಳಿಕೋರರಲ್ಲಿ ಒಂಬತ್ತು ಮಂದಿ ಸೇರಿದಂತೆ ಒಟ್ಟು 175 ಜನರು ಸಾವನ್ನಪ್ಪಿದರು, 300 ಕ್ಕೂ ಹೆಚ್ಚು ಜನರು ಗಾಯಗೊಂಡರು. ಈ ಸರಣಿ ಬಾಂಬ್ ಸ್ಫೋಟ ಮುಂಬೈನ ಬೇರೆ ಬೇರೆ ಕಡೆಗಳಲ್ಲಿ ಏಕ ಕಾಲಕ್ಕೆ ನಡೆದಿತ್ತು. ಅಜ್ಮಲ್ ಕಸಬ್ ಎನ್ನುವ ಭಯೋತ್ಪಾದಕನ್ನು ಜೀವಂತ ಹಿಡಿಯಲಾಗಿತ್ತು. ಈತನಿಗೆ 2012ನೇ ಇಸವಿಯಲ್ಲಿ ಪಾಸಿ ವಿಧಿಸಲಾಗಿತ್ತು.
ಯಾರಿವ ತಹವ್ವೂರ್ ರಾಣಾ ?
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಜನಿಸಿದವ ಮತ್ತು ಪಾಕಿಸ್ತಾನ ಸೇನಾ ವೈದ್ಯಕೀಯ ದಳಕ್ಕೆ ವೃತ್ತಿಯನ್ನು ಮಾಡುತ್ತಿದ್ದ. 1997 ರಲ್ಲಿ ರಾಜೀನಾಮೆ ನೀಡಿ ಕೆನಡಾಕ್ಕೆ ತೆರಳಿದ್ದ. ಅಲ್ಲಿ ವಲಸೆ ಸಲಹಾ ಸೇವೆ ಸೇರಿದಂತೆ ಬಹು ವ್ಯವಹಾರಗಳನ್ನು ನಡೆಸುತ್ತಿದ್ದ ಈತ 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಗಳಲ್ಲಿ ಒಬ್ಬ. ಈಗ ಈತನ ವಯಸ್ಸು 64 ವರ್ಷ.
ತಹವ್ವೂರ್ ರಾಣಾನ ಪಾತ್ರ
NIA ಆರೋಪಪಟ್ಟಿಯ ಪ್ರಕಾರ, ಡೇವಿಡ್ ಹೆಡ್ಲಿ ಎನ್ನುವ ಭಯೋತ್ಪಾದಕ, ದೆಹಲಿ, ಮುಂಬೈ, ಜೈಪುರ, ಪುಷ್ಕರ್, ಗೋವಾ ಮತ್ತು ಪುಣೆ ಸೇರಿದಂತೆ ಹಲವಾರು ಭಾರತೀಯ ನಗರಗಳಿಗೆ ವಲಸೆ ಕಾನೂನು ಕೇಂದ್ರ ಎಂಬ ಕಂಪನಿಯ ಪ್ರತಿನಿಧಿಯ ಸೋಗಿನಲ್ಲಿ ಪ್ರಯಾಣಿಸುತ್ತಿದ್ದ. ಕಂಪನಿಯ ಕಚೇರಿ ಮುಂಬೈನ ಟಾರ್ಡಿಯೋ ರಸ್ತೆಯಲ್ಲಿದ್ದು, ರಾಣಾ ಹೆಡ್ಲಿಗೆ ಕಚೇರಿ ಸ್ಥಾಪಿಸಲು ಸಹಾಯ ಮಾಡಿದ್ದಾನೆ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ. ತಹವ್ವೂರ್ ಕೂಡ ಭಾರತದ ವಿವಿಧ ಸ್ಥಳಗಳಿಗೆ ಪ್ರಯಾಣಿಸಿದ್ದಾನೆ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ. ಹೆಡ್ಲಿ, ರಾಣಾ, ಲಷ್ಕರ್-ಎ-ತೋಯ್ಬಾ ಸಂಸ್ಥಾಪಕ ಹಫೀಜ್ ಸಯೀದ್, ಎಲ್‌ಇಟಿ ಸಹ-ಸಂಸ್ಥಾಪಕ ಝಕಿ-ಉರ್-ರೆಹಮಾನ್ ಲಖ್ವಿ ಮತ್ತು ಇತರರು "ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಗಳಿಗೆ ಸಹಾಯ ಮತ್ತು ಪ್ರಚೋದನೆ ನೀಡಿದ್ದಾರೆ" ಎಂದು ತನಿಖೆಯಿಂದ ತಿಳಿದುಬಂದಿದೆ. ಡೇವಿಡ್ ಹೆಡ್ಲಿ ಅಮೇರಿಕಾ ಜೈಲಿನಲ್ಲಿ ಬಂದನದಲ್ಲಿದ್ದಾನೆ.
ತಹವ್ವೂರ್ ರಾಣಾ ಭಾರತಕ್ಕೆ ರವಾನೆ
ಅಮೆರಿಕಾದ ಸ್ಪೆಷಲ್ ಕೋರ್ಟ್ ತಹವ್ವೂರ್ ರಾಣಾನನ್ನು ಭಾರತಕ್ಕೆ ಕರೆದುಕೊಂಡು ಹೋಗಲು ಅನುಮತಿ ನೀಡಿದೆ. ಅದರ ಪ್ರಕಾರ ಭಾರತದ ಅಧಿಕಾರಿಗಳು ಈಗಾಗಲೇ ತಹವ್ವೂರ್ ರಾಣಾನನ್ನು ಕರೆದುಕೊಂಡು ಬರುವ ಸಿದ್ಧತೆ ನಡಿಸಿದ್ದು, ಇಂದು ಸಂಜೆಯ ಒಳಗೆ ( ಏಪ್ರಿಲ್ 10,2025) ಆತ ದೆಹಲಿ ತಲುಪನಿದ್ದಾನೆ ಮತ್ತು ಮುಂದಿನ ತನಿಖೆ ನಡೆಯಲಿದೆ.