ಮಂಗಳೂರು: 5ಜಿ ಸಿಮ್‌ಗೆ ನವೀಕರಿಸುವುದಾಗಿ ನಂಬಿಸಿ ಮಂಗಳೂರಿನ ವ್ಯಕ್ತಿಯೊಬ್ಬರಿಂದ ಸುಮಾರು ₹23.98 ಲಕ್ಷ ಹಣ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಜುಲೈ 8ರಂದು ಮೊಬೈಲ್ ಸೇವಾ ಸಂಸ್ಥೆಯ ಕಸ್ಟಮರ್ ಕೇರ್ ಸಿಬ್ಬಂದಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ಕರೆ ಮಾಡಿ, ಸಿಮ್ ಅನ್ನು 5ಜಿ ಸೇವೆಗೆ ಅಪ್‌ಗ್ರೇಡ್ ಮಾಡಬೇಕೆಂದು ತಿಳಿಸಿದ್ದ. ಬಳಿಕ ಇಮೇಲ್‌ಗೆ ಬರುವ ಸಂದೇಶಕ್ಕೆ ಪ್ರತಿಕ್ರಿಯಿಸುವಂತೆ ಸೂಚಿಸಿದ್ದು, ಕೆಲವು ಗಂಟೆಗಳ ಕಾಲ ನೆಟ್‌ವರ್ಕ್ ಸ್ಥಗಿತಗೊಳ್ಳಲಿದೆ ಎಂದಿದ್ದ.
ಮುಂದಿನ ದಿನವೂ ಸಿಮ್ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಸ್ಥಳೀಯ ಕಚೇರಿಗೆ ತೆರಳಿ ವಿಚಾರಿಸಿದಾಗ ತಾನು ಮೋಸ ಹೋಗಿರುವುದು ತಿಳಿದುಬಂದಿದೆ.
ನಂತರ ಬ್ಯಾಂಕ್ ಖಾತೆ ಪರಿಶೀಲಿಸಿದ ವೇಳೆ ಖಾತೆ ಹಾಗೂ ವಿವಿಧ ಕ್ರೆಡಿಟ್ ಕಾರ್ಡ್‌ಗಳಿಂದ ಸಾಲ ಪಡೆದು ಒಟ್ಟು ₹23,98,138 ಹಣವನ್ನು ಅಪರಿಚಿತ ಖಾತೆಗಳಿಗೆ ವರ್ಗಾಯಿಸಿರುವುದು ಪತ್ತೆಯಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.





