21 September 2026 |

ಬಂಟ್ವಾಳದಲ್ಲಿ ದುರಂತ: ಸೊಪ್ಪು ಕೊಯ್ಯುತ್ತಿದ್ದ 82 ವರ್ಷದ ವೃದ್ಧ ವಿದ್ಯುತ್ ಸ್ಪರ್ಶಿಸಿ ಸಾವು

  • 15 Jul 2026 10:28:42 AM

ಬಂಟ್ವಾಳ: ಸೊಪ್ಪು ಕೊಯ್ಯಲು ತೆರಳಿದ್ದ 82 ವರ್ಷದ ವೃದ್ಧರೊಬ್ಬರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ದುರ್ಘಟನೆ ಬಂಟ್ವಾಳ ತಾಲೂಕಿನ ಬಿ. ಮೂಡ ಗ್ರಾಮದ ಮೊಡಂಕಾಪು ಸಮೀಪದ ರಾಜೀವ ಪಲಿಕೆ ಪ್ರದೇಶದಲ್ಲಿ ಮಂಗಳವಾರ ನಡೆದಿದೆ.

 

ಮೃತರನ್ನು ಕೃಷ್ಣಪ್ಪ ಕುಲಾಲ್ (82) ಎಂದು ಗುರುತಿಸಲಾಗಿದೆ.

 

ಮನೆಯ ಸಮೀಪದ ಗುಡ್ಡದಲ್ಲಿ ಸೊಪ್ಪು ಕತ್ತರಿಸುತ್ತಿದ್ದ ವೇಳೆ, 110 ಕೆ.ವಿ. ಹೈಟೆನ್ಷನ್ ವಿದ್ಯುತ್ ಮಾರ್ಗದ ಕೆಳಭಾಗದಲ್ಲಿ ಕೆಲಸ ಮಾಡುತ್ತಿದ್ದಾಗ ಅವರಿಗೆ ವಿದ್ಯುತ್ ಸ್ಪರ್ಶವಾಗಿದೆ ಎಂದು ತಿಳಿದುಬಂದಿದೆ. ಸ್ಥಳದಲ್ಲಿದ್ದವರು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರೂ, ಅವರು ಅಷ್ಟರಲ್ಲೇ ಮೃತಪಟ್ಟಿದ್ದರು.

 

ಘಟನೆಯ ಮಾಹಿತಿ ತಿಳಿದ ಕೂಡಲೇ ಪೊಲೀಸರು, ಮೆಸ್ಕಾಂ ಅಧಿಕಾರಿಗಳು ಹಾಗೂ ಸ್ಥಳೀಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವಿದ್ಯುತ್ ಸ್ಪರ್ಶ ಹೇಗೆ ಸಂಭವಿಸಿತು ಎಂಬ ಕುರಿತು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.