ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಗ್ರಾಹಕ ಸೇವಾ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಸಾಧನೆ ಮಾಡಿದ್ದು, ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್‌ನ್ಯಾಶನಲ್ (ಎಸಿಐ) ಸಂಸ್ಥೆಯ ‘ಏರ್‌ಪೋರ್ಟ್ ಕಸ್ಟಮರ್ ಎಕ್ಸ್‌ಪೀರಿಯನ್ಸ್ ಅಕ್ರೆಡಿಟೇಶನ್’ ಯೋಜನೆಯಡಿ ಅತ್ಯುನ್ನತ ‘ಲೆವೆಲ್ 5’ ಮಾನ್ಯತೆಯನ್ನು ಪಡೆದುಕೊಂಡಿದೆ.
ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್‌ನ ವಿಮಾನ ನಿಲ್ದಾಣಗಳ ಜಾಲದಲ್ಲಿ ಮುಂಬಯಿ ಮತ್ತು ಅಹಮದಾಬಾದ್ ವಿಮಾನ ನಿಲ್ದಾಣಗಳ ನಂತರ ಈ ಗೌರವಕ್ಕೆ ಪಾತ್ರವಾದ ಮೂರನೇ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಮಂಗಳೂರಿಗೆ ದೊರೆತಿದೆ. ಜೊತೆಗೆ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಕ ಕರ್ನಾಟಕದಲ್ಲಿ ಈ ಮಟ್ಟದ ಮಾನ್ಯತೆ ಪಡೆದ ಎರಡನೇ ವಿಮಾನ ನಿಲ್ದಾಣವಾಗಿಯೂ ಗುರುತಿಸಿಕೊಂಡಿದೆ.
ದೇಶದ ಮಟ್ಟದಲ್ಲಿ ನೋಡಿದರೆ, ಈ ಜಾಗತಿಕ ಮಾನ್ಯತೆಯನ್ನು ಇದುವರೆಗೆ ಕೇವಲ ನಾಲ್ಕು ವಿಮಾನ ನಿಲ್ದಾಣಗಳು ಮಾತ್ರ ಗಳಿಸಿವೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 2024ರ ಫೆಬ್ರವರಿಯಲ್ಲಿ ‘ಲೆವೆಲ್ 3’ ಮತ್ತು 2025ರ ಜುಲೈನಲ್ಲಿ ‘ಲೆವೆಲ್ 4’ ಮಾನ್ಯತೆ ಪಡೆದಿದ್ದು, ಇದೀಗ ‘ಲೆವೆಲ್ 5’ ಹಂತ ತಲುಪುವ ಮೂಲಕ ಮತ್ತೊಂದು ಮೈಲುಗಲ್ಲು ನಿರ್ಮಿಸಿದೆ.
ವಿಮಾನ ನಿಲ್ದಾಣದ ಎಲ್ಲಾ ಕಾರ್ಯವ್ಯವಸ್ಥೆಗಳಲ್ಲೂ ಪ್ರಯಾಣಿಕ ಕೇಂದ್ರಿತ ಸೇವೆಗಳನ್ನು ಸಮರ್ಥವಾಗಿ ಅಳವಡಿಸಿಕೊಂಡು, ಉನ್ನತ ಮಟ್ಟದ ಗ್ರಾಹಕ ಅನುಭವವನ್ನು ಒದಗಿಸಿರುವುದನ್ನು ‘ಲೆವೆಲ್ 5’ ಮಾನ್ಯತೆ ಪ್ರತಿಬಿಂಬಿಸುತ್ತದೆ.





