21 September 2026 |

ವಿದೇಶಿ ಪ್ರವಾಸಿಗೆ ಸೀರೆ ಉಡಿಸಲು ನೆರವಾದ ಮಹಿಳಾ ಪೊಲೀಸ್; ಖಾಕಿಯ ಮಾನವೀಯತೆ ಮೆಚ್ಚಿದ ನೆಟ್ಟಿಗರು

  • 15 Jul 2026 08:31:26 PM

ಆಗ್ರಾ: ತಾಜ್‌ಮಹಲ್ ವೀಕ್ಷಣೆಗೆ ಬಂದಿದ್ದ ವಿದೇಶಿ ಮಹಿಳಾ ಪ್ರವಾಸಿಗೆಯೊಬ್ಬರಿಗೆ ಸೀರೆ ಸರಿಯಾಗಿ ಉಡಲು ಸಹಾಯ ಮಾಡಿದ ಉತ್ತರ ಪ್ರದೇಶದ ಮಹಿಳಾ ಪೊಲೀಸ್ ಸಿಬ್ಬಂದಿಯ ಮಾನವೀಯ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

 

ಭಾರತೀಯ ಸಂಸ್ಕೃತಿಯನ್ನು ಗೌರವಿಸುವ ಉದ್ದೇಶದಿಂದ ಸೀರೆ ಧರಿಸಿ ತಾಜ್‌ಮಹಲ್‌ಗೆ ಬಂದಿದ್ದ ವಿದೇಶಿ ಮಹಿಳೆಗೆ ಸೀರೆ ಸರಿಯಾಗಿ ಉಡುವ ಅನುಭವ ಇರಲಿಲ್ಲ. ಇದರಿಂದ ಸೀರೆ ಪದೇ ಪದೇ ಸಡಿಲವಾಗುತ್ತಿದ್ದು, ಸಾರ್ವಜನಿಕ ಸ್ಥಳದಲ್ಲಿ ಅಸೌಕರ್ಯ ಅನುಭವಿಸುತ್ತಿದ್ದರು.

 

ಈ ವೇಳೆ ಕರ್ತವ್ಯದಲ್ಲಿದ್ದ ಉತ್ತರ ಪ್ರದೇಶ ಪ್ರವಾಸೋದ್ಯಮ ಪೊಲೀಸ್ ವಿಭಾಗದ ಮಹಿಳಾ ಕಾನ್‌ಸ್ಟೇಬಲ್ ಪರಿಸ್ಥಿತಿಯನ್ನು ಗಮನಿಸಿ, ಮಹಿಳೆಯ ಬಳಿ ತೆರಳಿ ಸೀರೆಯನ್ನು ಸರಿಯಾಗಿ ಉಡಲು ನೆರವಾದರು. ಅವರ ಈ ಸಹಾಯದಿಂದ ವಿದೇಶಿ ಮಹಿಳೆ ನೆಮ್ಮದಿಯಿಂದ ತಾಜ್‌ಮಹಲ್ ವೀಕ್ಷಣೆ ಮುಂದುವರಿಸಿದರು.

 

ಈ ಘಟನೆಯ ವಿಡಿಯೋ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರತೀಯ ಆತಿಥ್ಯ ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿಯ ಮಾನವೀಯ ಸೇವಾ ಮನೋಭಾವವನ್ನು ಅನೇಕರು ಶ್ಲಾಘಿಸುತ್ತಿದ್ದಾರೆ.