ಗಾಂಧಿನಗರ : ಮಹಿಳೆ ಸ್ನಾನ ಮಾಡುತ್ತಿದ್ದ ವೇಳೆ ಆಕೆಗೆ ತಿಳಿಯದಂತೆ ವಿಡಿಯೋ ಚಿತ್ರೀಕರಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ಲೈಂಗಿಕವಾಗಿ ಶೋಷಣೆ ನಡೆಸುತ್ತಿದ್ದ ಯುವಕನನ್ನು ದಂಪತಿ ಸೇರಿ ಹತ್ಯೆ ಮಾಡಿದ ಘಟನೆ ಗುಜರಾತ್‌ನ ಗಾಂಧಿನಗರ ಜಿಲ್ಲೆಯ ಕಲೋಲ್ ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿದೆ.
ಮೃತನನ್ನು ಹಾರ್ದಿಕ್ ಠಾಕೂರ್ ಎಂದು ಗುರುತಿಸಲಾಗಿದೆ. ಆರೋಪದ ಪ್ರಕಾರ, ಹಾರ್ದಿಕ್ ಮಹಿಳೆ ಸ್ನಾನ ಮಾಡುತ್ತಿದ್ದ ದೃಶ್ಯವನ್ನು ರಹಸ್ಯವಾಗಿ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದ. ಬಳಿಕ ಆ ವಿಡಿಯೋವನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿ, ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ.
ವಿಡಿಯೋ ಬಹಿರಂಗವಾಗುವ ಭಯದಿಂದ ಮಹಿಳೆ ಆರಂಭದಲ್ಲಿ ಆತನ ಒತ್ತಾಯಕ್ಕೆ ಮಣಿದಿದ್ದಳು. ಆದರೆ, ಹಾರ್ದಿಕ್‌ನ ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದುದರಿಂದ ಮಹಿಳೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಹಿಳೆಯ ಪತಿ ವಿದ್ಯುತ್ ಗುತ್ತಿಗೆದಾರನಾಗಿದ್ದು, ದಂಪತಿ ಸೇರಿ ಹಾರ್ದಿಕ್‌ನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಜುಲೈ 11ರಂದು ಪತಿ ಕೆಲಸಕ್ಕೆ ಹೋಗುತ್ತಿರುವಂತೆ ನಾಟಕವಾಡಿ ಬೈಕ್‌ನಲ್ಲಿ ಮನೆಯಿಂದ ಹೊರಟಿದ್ದ. ಅದಕ್ಕೂ ಮುನ್ನ ಮಹಿಳೆ ಹಾರ್ದಿಕ್‌ಗೆ ಕರೆ ಮಾಡಿ, “ಪತಿ ಕೆಲಸಕ್ಕೆ ಹೋದ ಬಳಿಕ ಮನೆಗೆ ಬಾ” ಎಂದು ಹೇಳಿದ್ದಳು.
ಸುಮಾರು ಬೆಳಿಗ್ಗೆ 9.30ರ ವೇಳೆಗೆ ಹಾರ್ದಿಕ್ ಮಹಿಳೆಯ ಮನೆಗೆ ಬಂದಿದ್ದಾನೆ. ಇದೇ ವೇಳೆ ಪತಿ ಮರಳಿ ಮನೆಗೆ ಬಂದು, ದಂಪತಿ ಇಬ್ಬರೂ ಸೇರಿ ಪೇಟಾ (ತಲೆಗೆ ಕಟ್ಟುವ ಬಟ್ಟೆ) ಹಾಗೂ ಫ್ಯಾನ್‌ನ ವಿದ್ಯುತ್ ಕೇಬಲ್ ಬಳಸಿ ಆತನ ಕುತ್ತಿಗೆಯನ್ನು ಬಿಗಿದು ಹತ್ಯೆ ಮಾಡಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಬಳಿಕ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಹೊರಭಾಗದಲ್ಲಿ ಎಸೆದಿದ್ದ ದಂಪತಿ, ಊರಿನಿಂದ ಪರಾರಿಯಾಗಲು ಯೋಜನೆ ರೂಪಿಸಿದ್ದರು ಎನ್ನಲಾಗಿದೆ.
ಈ ನಡುವೆ ಹಾರ್ದಿಕ್‌ನ ತಂದೆ ರಮೇಶ್‌ಜಿ ಠಾಕೂರ್ ಪುತ್ರ ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಪ್ರಕರಣವನ್ನು ಭೇದಿಸಿ, ಪತಿ-ಪತ್ನಿಯನ್ನು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.





