21 September 2026 |

ಮಂಗಳೂರಿನ ಕರಾವಳಿಗೆ ಶಾಶ್ವತ ರಕ್ಷಣೆ: 12 ಕಡಲತೀರಗಳಲ್ಲಿ ₹250 ಕೋಟಿ ಪರಿಸರ ಸ್ನೇಹಿ ಸಂರಕ್ಷಣಾ ಯೋಜನೆ

  • 16 Jul 2026 11:50:42 AM

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ವರ್ಷಂಪ್ರತಿ ಉಂಟಾಗುತ್ತಿರುವ ಕಡಲ್ಕೆರೆತ ಸಮಸ್ಯೆಗೆ ದೀರ್ಘಕಾಲಿಕ ಪರಿಹಾರ ಒದಗಿಸುವ ಉದ್ದೇಶದಿಂದ ಸುಮಾರು ₹250 ಕೋಟಿ ವೆಚ್ಚದ ಕರಾವಳಿ ಸಂರಕ್ಷಣಾ ಯೋಜನೆ ಜಾರಿಯಾಗಲು ಸಿದ್ಧವಾಗಿದೆ. ಕರ್ನಾಟಕ ಜಲಸಾರಿಗೆ ಮಂಡಳಿ ಮೂಲಕ ಅನುಷ್ಠಾನಗೊಳ್ಳಲಿರುವ ಈ ಯೋಜನೆಗೆ ಚೆನ್ನೈನ ರಾಷ್ಟ್ರೀಯ ಸಂಸ್ಥೆ ನಡೆಸಿದ ವೈಜ್ಞಾನಿಕ ಅಧ್ಯಯನವೇ ಆಧಾರವಾಗಿದೆ.

 

ಹಲವು ವರ್ಷಗಳಿಂದ ಕರಾವಳಿಯಲ್ಲಿ ಕಡಲ್ಕೆರೆತ ತಡೆಯಲು ಕಲ್ಲು ಹಾಗೂ ಮರಳು ಚೀಲಗಳ ಮೂಲಕ ತಾತ್ಕಾಲಿಕ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿತ್ತು. ಸುಮಾರು 15 ವರ್ಷಗಳ ಹಿಂದೆ ಎಡಿಬಿ ನೆರವಿನಿಂದ ಕೆಲವು ಪ್ರದೇಶಗಳಲ್ಲಿ ಶಾಶ್ವತ ಕಾಮಗಾರಿಗಳನ್ನೂ ಕೈಗೆತ್ತಿಕೊಳ್ಳಲಾಗಿತ್ತು. ಇದೀಗ ಮತ್ತೊಮ್ಮೆ ಸಮಗ್ರ ಕರಾವಳಿ ನಿರ್ವಹಣಾ ಯೋಜನೆಯನ್ನು ಸರ್ಕಾರ ಜಾರಿಗೆ ತರಲು ಮುಂದಾಗಿದೆ.

 

‘ನಮ್ಮ ಕರಾವಳಿ ನಮ್ಮ ಜೀವನರೇಖೆ; ಕರಾವಳಿ ಸಂರಕ್ಷಣೆ, ಜೀವನೋಪಾಯದ ರಕ್ಷಣೆ’ ಎಂಬ ಪರಿಕಲ್ಪನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ 37.34 ಕಿಲೋಮೀಟರ್ ಉದ್ದದ ಕರಾವಳಿ ವ್ಯಾಪ್ತಿಯಲ್ಲಿ ಶೋರ್‌ಲೈನ್ ಮ್ಯಾನೇಜ್‌ಮೆಂಟ್ ಪ್ಲಾನ್ (ಎಸ್‌ಎಂಪಿ) ಜಾರಿಯಾಗಲಿದೆ.

 

ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ (ಎನ್‌ಜಿಟಿ) ಸೂಚನೆಗಳು ಹಾಗೂ ಸಿಆರ್‌ಝಡ್-2019 ನಿಯಮಾವಳಿಗಳ ಅನ್ವಯ, ಚೆನ್ನೈನ ನ್ಯಾಷನಲ್ ಸೆಂಟರ್ ಫಾರ್ ಸಸ್ಟೇನಬಲ್ ಕೋಸ್ಟಲ್ ಮ್ಯಾನೇಜ್‌ಮೆಂಟ್ (ಎನ್‌ಸಿಎಸ್‌ಸಿಎಂ) ಸಮಗ್ರ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿದೆ. ಈ ವರದಿಯನ್ನು ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ.

 

ಎಸ್‌ಎಂಪಿಯಲ್ಲಿ ಶಿಫಾರಸು ಮಾಡಲಾದ ಕಾಮಗಾರಿಗಳಿಗೆ ಸಂಬಂಧಿಸಿದ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಜವಾಬ್ದಾರಿಯನ್ನು ಕರ್ನಾಟಕ ಜಲಸಾರಿಗೆ ಮಂಡಳಿಗೆ ನೀಡಲಾಗಿದೆ. ಡಿಪಿಆರ್ ಪೂರ್ಣಗೊಂಡ ಬಳಿಕ ಯೋಜನೆಯ ಅಂತಿಮ ವೆಚ್ಚ ಮತ್ತು ಕಾಮಗಾರಿಗಳ ರೂಪುರೇಷೆಗಳು ನಿರ್ಧಾರವಾಗಲಿವೆ.

 

ಯೋಜನೆಯ ಪ್ರಮುಖ ಉದ್ದೇಶ ಕರಾವಳಿಯ ನೈಸರ್ಗಿಕ ಸೌಂದರ್ಯವನ್ನು ಕಾಪಾಡುತ್ತಲೇ ಕಡಲ್ಕೆರೆತ ನಿಯಂತ್ರಿಸುವುದಾಗಿದೆ. ಪಣಂಬೂರು ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಕಲ್ಲು ತಡೆಗೋಡೆಗಳ ಬದಲಿಗೆ ಕೃತಕ ರೀಫ್‌ಗಳು, ಹಸಿರು ವಲಯಗಳ ಅಭಿವೃದ್ಧಿ ಸೇರಿದಂತೆ ಪರಿಸರ ಸ್ನೇಹಿ ಕ್ರಮಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ಇದರಿಂದ ಸಮುದ್ರ ಪರಿಸರದ ಸಮತೋಲನ ಕಾಪಾಡುವುದರ ಜೊತೆಗೆ ಮೀನುಗಾರರ ಹಿತಾಸಕ್ತಿಯನ್ನೂ ರಕ್ಷಿಸುವ ನಿರೀಕ್ಷೆ ಇದೆ.

 

ಡಿಪಿಆರ್ ಸಿದ್ಧತೆಗೆ ಮುನ್ನ ಅಲೆಗಳ ತೀವ್ರತೆ, ಗಾಳಿ, ಬಿರುಗಾಳಿ, ಸಮುದ್ರ ಉಬ್ಬರ, ಮಾನವ ನಿರ್ಮಿತ ಕಾಮಗಾರಿಗಳು, ಮರಳುಗಾರಿಕೆ, ನದಿ ಅಣೆಕಟ್ಟುಗಳು ಹಾಗೂ ನಗರೀಕರಣದಂತಹ ಅಂಶಗಳ ಕುರಿತು ಸಮಗ್ರ ವೈಜ್ಞಾನಿಕ ಅಧ್ಯಯನ ನಡೆಸಲಾಗಿದೆ.

 

ತಾತ್ಕಾಲಿಕ ಪರಿಹಾರಗಳ ಬದಲಿಗೆ ಸಹಜ ಕರಾವಳಿ ವ್ಯವಸ್ಥೆಗೆ ಹೊಂದಿಕೊಳ್ಳುವ ಕ್ರಮಗಳನ್ನು ಅಳವಡಿಸಿ, ಪರಿಸರ, ಆರ್ಥಿಕ ಹಾಗೂ ಸಾಮಾಜಿಕ ಸಮತೋಲನ ಕಾಪಾಡುವುದು, ದೀರ್ಘಾವಧಿಯಲ್ಲಿ ಅಪಾಯ ಮತ್ತು ವೆಚ್ಚ ಕಡಿಮೆ ಮಾಡುವುದು ಹಾಗೂ ಮುಂದಿನ ಪೀಳಿಗೆಗೆ ಸುರಕ್ಷಿತ ಕರಾವಳಿಯನ್ನು ಒದಗಿಸುವುದು ಯೋಜನೆಯ ಪ್ರಮುಖ ಗುರಿಯಾಗಿದೆ.

 

ಕರಾವಳಿ ರಕ್ಷಣೆಗೆ ಆದ್ಯತೆಯಾಗಿ ಗುರುತಿಸಲಾದ 12 ಪ್ರದೇಶಗಳು:

 

• ಬಟ್ಟಪಾಡಿ ಬೀಚ್

• ಉಚ್ಚಿಲ ಬೀಚ್

• ಸೋಮೇಶ್ವರ ಬೀಚ್

• ಉಳ್ಳಾಲ ಬೀಚ್

• ಪಣಂಬೂರು ಬೀಚ್

• ಹೊಸಬೆಟ್ಟು

• ಸುರತ್ಕಲ್ ಬೀಚ್

• ಸುರತ್ಕಲ್ ಲೈಟ್‌ಹೌಸ್ ಪ್ರದೇಶ

• ರೆಡ್‌ರಾಕ್ ಬೀಚ್

• ಮೂಲ್ಕಿ ಬೀಚ್

• ಹಳೆಯಂಗಡಿ ಬೀಚ್

• ಸಸಿಹಿತ್ತು ಬೀಚ್