ಓಡಿಸ್ಸಾ: ಭಕ್ತಿ ಮತ್ತು ದಯೆ ಒಂದಕ್ಕೊಂದು ಪೂರಕವಾದ ಮೌಲ್ಯಗಳು. ಎಲ್ಲಿ ನಿಜವಾದ ಭಕ್ತಿ ಇರುತ್ತದೆಯೋ, ಅಲ್ಲಿ ಮಾನವೀಯತೆಯೂ ಇರುತ್ತದೆ ಎಂಬುದಕ್ಕೆ ಜಗತ್ತಿನ ಪ್ರಸಿದ್ಧ ಪುರಿ ಜಗನ್ನಾಥ ದೇವರ ರಥಯಾತ್ರೆಯಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ.
ಭಾರೀ ಮಳೆಯ ನಡುವೆಯೂ ಜಗನ್ನಾಥ ರಥಯಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಿದ್ದರು. ಇದೇ ವೇಳೆ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯನ್ನು ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ಸ್ಥಳಕ್ಕೆ ಆಗಮಿಸಿತು. ಇದನ್ನು ಗಮನಿಸಿದ ಭಕ್ತರು ಕ್ಷಣಾರ್ಧದಲ್ಲೇ ದಾರಿ ಬಿಟ್ಟು, ಆಂಬ್ಯುಲೆನ್ಸ್ ಸುಗಮವಾಗಿ ಸಾಗಲು ಅವಕಾಶ ಮಾಡಿಕೊಟ್ಟರು. ಈ ಮಾನವೀಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಜಗನ್ನಾಥ ದೇವರ ರಥಯಾತ್ರೆಯಲ್ಲಿ ಪ್ರತಿವರ್ಷ ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಇಡೀ ಪುರಿ ನಗರವೇ ಭಕ್ತರಿಂದ ತುಂಬಿ ತುಳುಕುವ ಈ ಸಂದರ್ಭದಲ್ಲಿ, ಜನಸಾಗರದ ಮಧ್ಯೆಯೂ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಭಕ್ತರ ನಡೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಭಕ್ತಿ ಎಂದರೆ ಕೇವಲ ದೇವರ ಆರಾಧನೆ ಮಾತ್ರವಲ್ಲ, ಸಂಕಷ್ಟದಲ್ಲಿರುವವರಿಗೆ ನೆರವಾಗುವುದೂ ಆಗಿದೆ ಎಂಬ ಸಂದೇಶವನ್ನು ಈ ಘಟನೆ ಮತ್ತೊಮ್ಮೆ ಸಾರಿದೆ.





