17 July 2026 |

ಉಪ್ಪಿನಂಗಡಿ ವ್ಯಾಪ್ತಿಯಲ್ಲಿ ನಕಲಿ ₹500 ನೋಟು ಮುದ್ರಣ ಜಾಲ ಭೇದ: ಬಾಡಿಗೆ ಮನೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ 7 ಮಂದಿ ಬಂಧನ

  • 16 Jul 2026 03:05:31 PM

ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ಅಡಿಂಜೆ ಗ್ರಾಮದಲ್ಲಿ ನಕಲಿ ₹500 ಮುಖಬೆಲೆಯ ನೋಟುಗಳನ್ನು ಮುದ್ರಿಸುತ್ತಿದ್ದ ತಂಡವೊಂದನ್ನು ಪೊಲೀಸರು ಪತ್ತೆಹಚ್ಚಿದ್ದು, ಕಾರ್ಯಾಚರಣೆ ನಡೆಸಿ 7 ಮಂದಿಯನ್ನು ಬಂಧಿಸಿದ್ದಾರೆ.

 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಅವರ ಮಾಹಿತಿ ಪ್ರಕಾರ, ಆರೋಪಿಗಳು ಬಾಡಿಗೆ ಮನೆಯಲ್ಲಿ ವಾಸವಿದ್ದು, ಅಲ್ಲಿಯೇ ನಕಲಿ ₹500 ನೋಟುಗಳನ್ನು ಮುದ್ರಿಸುವ ಕೃತ್ಯದಲ್ಲಿ ತೊಡಗಿದ್ದರು.

 

ದಾಳಿ ವೇಳೆ ಪೊಲೀಸರು ನಕಲಿ ₹500 ನೋಟುಗಳ ಕಟ್ಟುಗಳು, 21 ಎ4 (A4) ಗಾತ್ರದ ಮುದ್ರಿತ ಶೀಟ್‌ಗಳು, ಪ್ರಿಂಟರ್, ಕಂಪ್ಯೂಟರ್, ಕಟಿಂಗ್ ಬ್ಲೇಡ್, ಮಹಾತ್ಮ ಗಾಂಧೀಜಿ ಚಿತ್ರದ ಮುದ್ರಣ ಸಾಮಗ್ರಿ ಸೇರಿದಂತೆ ನಕಲಿ ನೋಟು ತಯಾರಿಕೆಗೆ ಬಳಸಲಾಗುತ್ತಿದ್ದ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

 

ಪ್ರಕರಣಕ್ಕೆ ಸಂಬಂಧಿಸಿದಂತೆ 7 ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ. ಈ ಜಾಲದ ಪ್ರಮುಖ ಸೂತ್ರಧಾರ ಯಾರು, ನಕಲಿ ನೋಟುಗಳನ್ನು ಎಲ್ಲಿ ಸಾಗಿಸಲಾಗುತ್ತಿತ್ತು ಹಾಗೂ ಇನ್ನಿತರ ಮಾಹಿತಿಗಳು ತನಿಖೆ ಪೂರ್ಣಗೊಂಡ ಬಳಿಕ ಬಹಿರಂಗವಾಗಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.