18 July 2026 |

ರಾಜ್ಯ ಸರ್ಕಾರದಿಂದ ಕರಾವಳಿ ಕಂಬಳಕ್ಕೆ ಭರ್ಜರಿ ಪ್ರೋತ್ಸಾಹ: ದ.ಕ.–ಉಡುಪಿಯ 23 ಕಂಬಳಗಳಿಗೆ ತಲಾ ₹5 ಲಕ್ಷ ಅನುದಾನ

  • 17 Jul 2026 10:34:11 AM

ಮಂಗಳೂರು: ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳಕ್ಕೆ ರಾಜ್ಯ ಸರ್ಕಾರದಿಂದ ಮಹತ್ವದ ಉತ್ತೇಜನ ದೊರೆತಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿನ 23 ಕಂಬಳ ಸಮಿತಿಗಳಿಗೆ ತಲಾ ₹5 ಲಕ್ಷದಂತೆ ಒಟ್ಟು ₹1.15 ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

 

ಈ ಕುರಿತು ಮಾತನಾಡಿದ ಅವರು, ಕಂಬಳಕ್ಕೆ ಸರ್ಕಾರದಿಂದ ಆರ್ಥಿಕ ನೆರವು ನೀಡುವಂತೆ ತಾವು ವಿಧಾನಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ್ದಾಗಿ ಹೇಳಿದರು. ಅದರಂತೆ ಪ್ರವಾಸೋದ್ಯಮ ಇಲಾಖೆಯ ಮೂಲಕ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

 

ಇದೇ ವೇಳೆ, ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನಲ್ಲಿ ಕಂಬಳ ಆಯೋಜಿಸುವ ಸಿದ್ಧತೆಗಳು ನಡೆಯುತ್ತಿವೆ ಎಂದೂ ಅವರು ಮಾಹಿತಿ ನೀಡಿದರು. ಕಂಬಳಕ್ಕೆ ಸರ್ಕಾರದಿಂದ ದೊರೆತಿರುವ ಈ ಬೆಂಬಲ ಕರಾವಳಿಯ ಸಾಂಸ್ಕೃತಿಕ ಪರಂಪರೆಯನ್ನು ಮತ್ತಷ್ಟು ಉತ್ತೇಜಿಸಲಿದೆ ಎಂದು ಸಂತಸ ವ್ಯಕ್ತಪಡಿಸಿದರು.

 

ಅಲ್ಲದೆ, 2027–28ರ ಕಂಬಳ ಋತುವಿಗೆ ರಾಜ್ಯ ಸರ್ಕಾರ ₹5 ಕೋಟಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.