18 July 2026 |

ಮಳೆಯಿಲ್ಲದೆ ಆತಂಕ: ಕದ್ರಿ ದೇವಾಲಯದಲ್ಲಿ ಪರ್ಜನ್ಯ ಜಪ, ವರುಣ ಪ್ರಾರ್ಥನೆ

  • 17 Jul 2026 04:04:01 PM

ಮಂಗಳೂರು: ಕರಾವಳಿ ಪ್ರದೇಶಗಳಲ್ಲಿ ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ಸಾಮಾನ್ಯವಾಗಿ ಭಾರೀ ಮಳೆಯಾಗಿ ನದಿಗಳು, ಬಾವಿಗಳು ಹಾಗೂ ತೊರೆಗಳು ತುಂಬಿ ಹರಿಯುವ ಸಮಯ. ಆದರೆ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಮನೆಮಾಡಿದೆ.

 

ಈ ಹಿನ್ನೆಲೆಯಲ್ಲಿ ಗುರುವಾರ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಮಳೆಯಾಗುವಂತೆ ಹಾಗೂ ಬರದಂತಹ ಪರಿಸ್ಥಿತಿ ನಿವಾರಣೆಯಾಗುವಂತೆ ವರುಣ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

 

"ಕರ್ನಾಟಕದ ಕರಾವಳಿಯಲ್ಲಿ ಜೂನ್–ಜುಲೈ ತಿಂಗಳುಗಳು ಭಾರೀ ಮಳೆಯ ಕಾಲ. ಸಾಮಾನ್ಯವಾಗಿ ನದಿಗಳು ಉಕ್ಕಿ ಹರಿಯುತ್ತವೆ, ತಗ್ಗು ಪ್ರದೇಶಗಳು ಜಲಾವೃತವಾಗುತ್ತವೆ. ಆದರೆ ಈ ಬಾರಿ ಮಳೆಯೇ ಕೈಕೊಟ್ಟಿದ್ದು, ವಾತಾವರಣದಲ್ಲಿ ಇನ್ನೂ ಬೇಸಿಗೆಯ ಉಷ್ಣಾಂಶವೇ ಮುಂದುವರಿದಿದೆ. ತೆರೆದ ಬಾವಿಗಳಲ್ಲಿ ನೀರಿನ ಸೆಲೆ ಕಾಣುತ್ತಿಲ್ಲ. ತೋಡುಗಳಲ್ಲಿ ಸಹಜವಾಗಿ ಹರಿಯಬೇಕಿದ್ದ ನೀರು ಸಹ ಇಲ್ಲದಂತಾಗಿದೆ. ಒಟ್ಟಾರೆ ಬರದ ವಾತಾವರಣ ನಿರ್ಮಾಣವಾಗಿದೆ," ಎಂದು ಪೂಜೆ ನೆರವೇರಿಸಿದ ಅರ್ಚಕರು ತಿಳಿಸಿದ್ದಾರೆ.

 

ಮಳೆಯ ಅನುಗ್ರಹ ದೊರೆಯುವಂತೆ, ನೀರಿನ ಕೊರತೆ ನಿವಾರಣೆಯಾಗುವಂತೆ ಹಾಗೂ ಪರಿಸರದಲ್ಲಿ ಉಂಟಾಗಿರುವ ಕ್ಷೋಭೆಯ ವಾತಾವರಣ ಶಮನವಾಗುವಂತೆ ದೇವಸ್ಥಾನದ ಗೋಮುಖ ತೀರ್ಥದಲ್ಲಿ ವಿಶೇಷ ಪ್ರಾರ್ಥನೆ, ವೇದ ಪಾರಾಯಣ ಮತ್ತು ಪರ್ಜನ್ಯ ಜಪ ನಡೆಸಲಾಯಿತು.

 

ಈ ಕುರಿತು ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, "ಕೃಷಿ ಮತ್ತು ನೀರಿನ ಸಂಸ್ಕೃತಿ ಸಂಕಷ್ಟಕ್ಕೆ ಸಿಲುಕಿರುವ ಈ ಸಂದರ್ಭದಲ್ಲಿ ಉತ್ತಮ ಮಳೆಯಾಗಲೆಂದು ವರುಣ ದೇವರನ್ನು ಪ್ರಾರ್ಥಿಸಿ ವೇದ ಪಾರಾಯಣ ಹಾಗೂ ಪರ್ಜನ್ಯ ಜಪವನ್ನು ಆಯೋಜಿಸಲಾಗಿದೆ," ಎಂದು ತಿಳಿಸಿದರು.