ಬಂಟ್ವಾಳ: ಶುಕ್ರವಾರ (ಜು.17) ರಾತ್ರಿ ಸುರಿದ ಭಾರೀ ಗಾಳಿ ಮತ್ತು ಮಳೆಯ ಅಬ್ಬರಕ್ಕೆ ಪೇರಮೊಗರು–ಪಂಜೊಳ್ಳೆ ರಸ್ತೆಯಲ್ಲಿ ವಿದ್ಯುತ್ ಕಂಬವೊಂದು ಕಾರಿನ ಮೇಲೆ ಉರುಳಿಬಿದ್ದ ಘಟನೆ ನಡೆದಿದೆ.
ಕಂಬಗಳು ಉರುಳಿದ ಪರಿಣಾಮ ವಿದ್ಯುತ್ ತಂತಿಗಳು ರಸ್ತೆಯ ಮೇಲೆಯೇ ಬಿದ್ದಿದ್ದರಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಕಾರಿನಲ್ಲಿದ್ದವರು ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.
ಘಟನೆಯ ಮಾಹಿತಿ ದೊರೆಯುತ್ತಿದ್ದಂತೆಯೇ ಕಂದಾಯ ಇಲಾಖೆ ಹಾಗೂ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಬಳಿಕ ವಿದ್ಯುತ್ ಕಂಬ ಹಾಗೂ ತಂತಿಗಳನ್ನು ತೆರವುಗೊಳಿಸುವ ಕಾರ್ಯ ಕೈಗೊಂಡಿದ್ದು, ವಿದ್ಯುತ್ ಸಂಪರ್ಕವನ್ನು ಪುನಃಸ್ಥಾಪಿಸಲು ಮೆಸ್ಕಾಂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರೀ ಗಾಳಿ-ಮಳೆಯ ಸಂದರ್ಭ ಸಾರ್ವಜನಿಕರು ಅಗತ್ಯ ಎಚ್ಚರಿಕೆ ವಹಿಸಿ ಸಂಚರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಟ್ರಾನ್ಸ್‌ಫಾರ್ಮರ್ ಮೇಲೆ ಬಿದ್ದ ಬೃಹತ್ ಮರ
ಇದೇ ವೇಳೆ, ಮಾಣಿ–ಬೊಳ್ಳುಕಲ್ಲು ರಾಷ್ಟ್ರೀಯ ಹೆದ್ದಾರಿಯಿಂದ ಪೆರಾಜೆ ಶ್ರೀ ರಾಮಚಂದ್ರಾಪುರ ಮಠಕ್ಕೆ ಸಂಪರ್ಕಿಸುವ ಕಮಲ ರಸ್ತೆಯ ಶ್ರೀ ದೇವಿ ಭಜನಾ ಮಂದಿರದ ಸಮೀಪ ಬೃಹತ್ ಮರವೊಂದು ವಿದ್ಯುತ್ ಟ್ರಾನ್ಸ್‌ಫಾರ್ಮರ್ ಮೇಲೆ ಉರುಳಿಬಿದ್ದಿದೆ.
ಮರ ಬಿದ್ದ ಪರಿಣಾಮ ವಿದ್ಯುತ್ ತಂತಿಗಳು ತುಂಡಾಗಿದ್ದು, ಮರ ರಸ್ತೆ ಮೇಲೂ ಬಿದ್ದಿದ್ದರಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ರಾತ್ರಿ ವೇಳೆ ಶ್ರೀ ಮಠದ ಕಾರ್ಯದರ್ಶಿ ಶಿವಪ್ರಸಾದ ಅವರ ನೇತೃತ್ವದಲ್ಲಿ ಸ್ಥಳೀಯರು ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ದಾರಿ ಮಾಡಿಕೊಟ್ಟರು.
ಘಟನೆಯಲ್ಲಿ ವಿದ್ಯುತ್ ಪರಿವರ್ತಕ ಹಾನಿಗೊಳಗಾಗಿರುವುದರಿಂದ ಪೆರಾಜೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಯ ಉಂಟಾಗಿದ್ದು, ಮೆಸ್ಕಾಂ ಸಿಬ್ಬಂದಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.





