ಬಂಟ್ವಾಳ: ಲಾವಣ್ಯ ಹತ್ಯೆ ಪ್ರಕರಣದ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಡುವುದು ಹಾಗೂ ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಉದ್ದೇಶದಿಂದ ಪ್ರಚೋದನಾತ್ಮಕ ಪೋಸ್ಟ್‌ಗಳನ್ನು ಪ್ರಸಾರ ಮಾಡಿದ ಆರೋಪದಡಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ.
ಈ ಹಿಂದೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ.95/2026ರಡಿ BNS-2023ರ ಕಲಂ 78, 126, 103 ಹಾಗೂ ಆರ್ಮ್ಸ್ ಆಕ್ಟ್‌ನ ಕಲಂ 25 ಮತ್ತು 27ರಡಿ ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣದ ಆರೋಪಿಯ ಭಾವಚಿತ್ರವನ್ನು ಕೇಸರಿ ಶಾಲು ಹಾಗೂ ಕುಂಕುಮದೊಂದಿಗೆ ಎಡಿಟ್ ಮಾಡಿ, ಭಜರಂಗದಳದ ಕಾರ್ಯಕರ್ತನಂತೆ ಬಿಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿಬಿಟ್ಟಿರುವ ಆರೋಪ ಕೇಳಿಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ಈ ಎಡಿಟ್ ಮಾಡಿದ ಚಿತ್ರಗಳೊಂದಿಗೆ ಪ್ರಚೋದನಾತ್ಮಕ ಬರಹಗಳನ್ನು ವಿವಿಧ ವಾಟ್ಸ್ಆಪ್ ಗುಂಪುಗಳು ಮತ್ತು ಇನ್‌ಸ್ಟಾಗ್ರಾಂ ಖಾತೆಗಳ ಮೂಲಕ ಪ್ರಸಾರ ಮಾಡಲಾಗಿದೆ. ಇದರಿಂದ ಸಾರ್ವಜನಿಕರಲ್ಲಿ ಗೊಂದಲ ಹಾಗೂ ಸಮಾಜದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸುವ ಪ್ರಯತ್ನ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಈ ಸಂಬಂಧ troll_master.__ ಇನ್‌ಸ್ಟಾಗ್ರಾಂ ಖಾತೆ, Yuva Belthangady, PPadmaraj Padmarajpari, Padmaraj Padmaraj Pari, Yuva Congress Belthangady ಹಾಗೂ Facts and Justice ವಾಟ್ಸ್ಆಪ್ ಗುಂಪುಗಳ ವಿರುದ್ಧ ಅ.ಕ್ರ.96/2026ರಡಿ BNS-2023ರ ಕಲಂ 196 ಹಾಗೂ 353(2)ರ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಬಂಟ್ವಾಳ ನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.





