21 September 2026 |

ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ತಲವಾರು ಹಿಡಿದು ಯುವಕನ ಅಟ್ಟಹಾಸ; ಆರೋಪಿಗೆ ಪೊಲೀಸ್ ಕಂಬಿ

  • 19 Jul 2026 11:27:03 AM

ಮೂಡುಬಿದಿರೆ: ಖಾಸಗಿ ಬಸ್ ನಿಲ್ದಾಣದ ಸಮೀಪ ಶನಿವಾರ ಸಂಜೆ ನಡೆದ ಘಟನೆ ಸಾರ್ವಜನಿಕರಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತು. ಯುವಕನೊಬ್ಬ ಕೈಯಲ್ಲಿ ತಲ್ವಾರ್ ಹಿಡಿದು ರಾಜಾರೋಷವಾಗಿ ಓಡಾಡುವುದಷ್ಟೇ ಅಲ್ಲದೆ, ಮೊಬೈಲ್ ಅಂಗಡಿಗೆ ನುಗ್ಗಿ ಸಿಬ್ಬಂದಿಗೆ ತಲ್ವಾರ್ ತೋರಿಸಿ ಮೊಬೈಲ್ ನೀಡುವಂತೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

 

ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಯುವಕ ಮೊದಲಿಗೆ ಬಸ್ ನಿಲ್ದಾಣದ ರಸ್ತೆಯಲ್ಲೇ ತಲ್ವಾರ್ ಹಿಡಿದು ಸಂಚರಿಸಿದ್ದು, ಇದನ್ನು ಕಂಡ ಸಾರ್ವಜನಿಕರು ಮತ್ತು ಪ್ರಯಾಣಿಕರು ಬೆಚ್ಚಿಬಿದ್ದಿದ್ದರು. ಬಳಿಕ ಸಮೀಪದ ಮೊಬೈಲ್ ಅಂಗಡಿಗೆ ನುಗ್ಗಿದ ಆತ, ಕೌಂಟರ್ ಬಳಿ ಇದ್ದ ಸಿಬ್ಬಂದಿಯನ್ನು ಬೆದರಿಸಿ ಮೊಬೈಲ್ ನೀಡುವಂತೆ ಒತ್ತಾಯಿಸಿದ್ದಾನೆ ಎಂದು ತಿಳಿದುಬಂದಿದೆ.

 

ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಧೈರ್ಯ ತೋರಿಸಿ ಆರೋಪಿಯನ್ನು ಸುತ್ತುವರಿದು, ಆತನ ಕೈಯಲ್ಲಿದ್ದ ತಲ್ವಾರ್ ಅನ್ನು ಕಸಿದುಕೊಂಡಿದ್ದಾರೆ. ಇದರಿಂದ ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

 

ಮಾಹಿತಿ ತಿಳಿದ ತಕ್ಷಣ ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ವಿಚಾರಣೆಯ ವೇಳೆ ಆತ ಬೆಳ್ತಂಗಡಿ ತಾಲೂಕಿನ ಪೆರಿಂಜೆ ನಿವಾಸಿ ಎಂದು ಹೇಳಿಕೊಂಡಿದ್ದಾನೆ ಎನ್ನಲಾಗಿದ್ದು, ಆತನ ಗುರುತು ಹಾಗೂ ಘಟನೆಯ ಹಿಂದಿನ ಕಾರಣಗಳ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 

ಸಾರ್ವಜನಿಕರು ಜಾಗರೂಕರಾಗಿದ್ದು, ಸಮಯೋಚಿತವಾಗಿ ಪ್ರತಿಕ್ರಿಯಿಸಿದ ಪರಿಣಾಮ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.